ಭಾರತದ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ ಎಮಿರೇಟ್ಸ್
ದುಬೈ,ಜ.26: ಎಮಿರೇಟ್ಸ್ ಉದ್ಯಮ ಸಮೂಹ ಭಾರತದ ಗಣರಾಜ್ಯೋತ್ಸವವನ್ನು ಇಂದು ವಿಶಿಷ್ಟವಾಗಿ ಆಚರಿಸಿತು. ಸಮೂಹದ ನೂರಕ್ಕೂ ಅಧಿಕ, ವಿವಿಧ ಹಿನ್ನೆಲೆಗಳ ಮತ್ತು ವಿಶೇಷತೆಗಳನ್ನು ಪ್ರತಿನಿಧಿಸುವ ಭಾರತೀಯ ಮತ್ತು ಸ್ಥಳೀಯ ಉದ್ಯೋಗಿಗಳು ಭಾರತದ 68ನೇ ಗಣರಾಜ್ಯೋತ್ಸವದ ಅಂಗವಾಗಿ ಸಾಲಾಗಿ ನಿಂತು 68ರ ಸಂಖ್ಯೆಯನ್ನು ರೂಪಿಸಿದ್ದರು.
ಎಮಿರೇಟ್ಸ್ ಸಮೂಹದ ಪ್ರಮುಖ ಹುದ್ದೆಗಳಲ್ಲಿ 14,000ಕ್ಕೂ ಅಧಿಕ ಭಾರತೀಯರು ಸೇವೆ ಸಲ್ಲಿಸುತ್ತಿದ್ದು, ಇದು ಸಮೂಹದ ಒಟ್ಟು ಉದ್ಯೋಗಿಗಳ ಸಂಖ್ಯೆಯ ಶೇ.21ರಷ್ಟಿದೆ.
ಈ ಮಹತ್ವದ ದಿನವನ್ನು ಭಾರತೀಯರೊಂದಿಗೆ ವಿಶಿಷ್ಟವಾಗಿ ಆಚರಿಸಲು ನಾವು ಬಯಸಿದ್ದೆವು. ಯುಎಇಯಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರಿದ್ದು, ಈ ದೇಶದ ಇತಿಹಾಸ ಮತ್ತು ಬೆಳವಣಿಗೆಯ ಅಖಂಡ ಭಾಗವಾಗಿದ್ದಾರೆ. ಯುಎಇ ಮತ್ತು ಭಾರತದ ನಡುವಿನ ಸದೃಢ ಸಂಬಂಧಕ್ಕೆ ಸೂಕ್ತ ದ್ಯೋತಕವಾಗಿರುವ ಈ ವಿಶೇಷ ಸಂದೇಶವನ್ನು ರವಾನಿಸುವಲ್ಲಿ ಸಂಸ್ಥೆಯ ವಿವಿಧ ವಿಭಾಗಗಳಿಂದ ನಮ್ಮ ಸಹೋದ್ಯೋಗಿಗಳು ಭಾಗಿಯಾಗಿರುವುದು ನಮಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಎಮಿರೇಟ್ಸ್‌ನ ಹಿರಿಯ ಉಪಾಧ್ಯಕ್ಷ (ವಾಣಿಜ್ಯಿಕ ಕಾರ್ಯಾಚರಣೆಗಳು-ಪಶ್ಚಿಮ ಏಷ್ಯಾಮತ್ತು ಹಿಂದು ಮಹಾಸಾಗರ) ಅಹ್ಮದ್ ಖೂರಿ ಅವರು ಈ ಸಂದರ್ಭದಲ್ಲಿ ಹೇಳಿದರು.
31 ವರ್ಷಗಳ ಹಿಂದೆ 1985ರಲ್ಲಿ ದಿಲ್ಲಿ ಮತ್ತು ಮುಂಬೈಗೆ ಮೊದಲ ಬಾರಿ ತನ್ನ ವಿಮಾನಯಾನಗಳನ್ನು ಆರಂಭಿಸುವ ಜೊತೆಗೆ ಭಾರತದೊಡನೆ ತನ್ನ ಪಾಲುದಾರಿಕೆಗೆ ಎಮಿರೇಟ್ಸ್ ನಾಂದಿ ಹಾಡಿತ್ತು.