ಸೌದಿ: ನೂತನ ಎಫ್-15 ಯುದ್ಧ ವಿಮಾನ ಪ್ರದರ್ಶನ
ರಿಯಾದ್, ಜ. 26: ಯಮನ್‌ನಲ್ಲಿ ವಿವಾದಾಸ್ಪದ ವಾಯು ದಾಳಿ ಆರಂಭಿಸಿದ ಸುಮಾರು ಎರಡು ವರ್ಷಗಳ ಬಳಿಕ, ಸೌದಿ ಅರೇಬಿಯವು ತನ್ನ ಮುಂದಿನ ತಲೆಮಾರಿನ ಯುದ್ಧ ವಿಮಾನವನ್ನು ಬುಧವಾರ ಅನಾವರಣಗೊಳಿಸಿದೆ.
ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಮಳಿಗೆಯೊಂದರಲ್ಲಿ ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್ ನಿರ್ಮಿಸಿದ ಎಫ್-15ಎಸ್‌ಎ ಈಗಲ್ ವಿಮಾನವನ್ನು ಪ್ರದರ್ಶಿಸಲಾಗುತ್ತಿದೆ.
ಪ್ರದರ್ಶನದಲ್ಲಿಟ್ಟಿರುವ ವಿಮಾನದ ಹೊಟ್ಟೆಯ ಭಾಗದಲ್ಲಿ ಕ್ಷಿಪಣಿಯೊಂದನ್ನು ಜೋಡಿಸಲಾಗಿದೆ ಹಾಗೂ ಹಿನ್ನೆಲೆಯಲ್ಲಿ ಬೃಹತ್ ಸೌದಿ ಧ್ವಜವೊಂದು ಹಾರಾಡುತ್ತಿದೆ.
ಕಿಂಗ್ ಫೈಸಲ್ ಏರ್ ಅಕಾಡಮಿಯಲ್ಲಿ ನಡೆದ ಅದರ 50ನೆ ವರ್ಷಾಚರಣೆ ಸಮಾರಂಭದಲ್ಲಿ ನೂತನ ಯುದ್ಧ ವಿಮಾನವನ್ನು ಪ್ರದರ್ಶಿಸಲಾಗುತ್ತಿದೆ. ಸೌದಿ ದೊರೆ ಸಲ್ಮಾನ್ ಮತ್ತು ಅವರ ಮಗ, ರಕ್ಷಣಾ ಸಚಿವ ಹಾಗೂ ಉಪ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ವಿಮಾನವನ್ನು ವೀಕ್ಷಿಸಿದರು.
ಯಮನ್‌ನಲ್ಲಿ ಬಂಡುಕೋರರ ವಿರುದ್ಧ ವಾಯು ದಾಳಿ ನಡೆಸುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟದ ಸದಸ್ಯನಾಗಿರುವ ಸುಡಾನ್ ದೇಶದ ಅಧ್ಯಕ್ಷ ಉಮರ್ ಅಲ್-ಬಶೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇರಾನ್ ಬೆಂಬಲಿತ ಹುದಿ ಬಂಡುಕೋರರು ಮತ್ತು ಯಮನ್‌ನ ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರಿಗೆ ನಿಷ್ಠರಾಗಿರುವ ಪಡೆಗಳು 2015ರ ಮಾರ್ಚ್‌ನಲ್ಲಿ ಯಮನ್‌ನ ಹೆಚ್ಚಿನ ಭಾಗಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಬಳಿಕ, ಸೌದಿ ನೇತೃತ್ವದ ಮಿತ್ರಪಡೆಗಳು ಯಮನ್ ಸರಕಾರದ ನೆರವಿಗೆ ಧಾವಿಸಿದವು. ಮಿತ್ರಪಡೆಗಳು ಬಂಡುಕೋರರ ಮೇಲೆ ವೈಮಾನಿಕ ದಾಳಿ ನಡೆಸಿದವು.
ಸೌದಿ ಅರೇಬಿಯವು ಸುಮಾರು 30 ಬಿಲಿಯ ಡಾಲರ್ (2.04 ಲಕ್ಷ ಕೋಟಿ ರೂಪಾಯಿ) ವೆಚ್ಚದಲ್ಲಿ 84 ಎಫ್-15ಎಸ್‌ಎ ಯುದ್ಧ ವಿಮಾನಗಳನ್ನು ತನ್ನ ವಾಯು ಪಡೆಗೆ ನಿಯೋಜಿಸಲಿದೆ. ಇದಕ್ಕೆ ಸಂಬಂಧಿಸಿ 2011ರಲ್ಲಿ ಕರಾರೊಂದಕ್ಕೆ ಸಹಿ ಹಾಕಲಾಗಿದೆ.