ಸೌದಿಯ ತೆರಿಗೆ ರಹಿತ ದಿನಗಳು ಇನ್ನು ನೆನಪು ಮಾತ್ರ...

Update: 2017-01-31 14:38 GMT

ರಿಯಾದ್, ಜ. 31: ತೆರಿಗೆರಹಿತ ಬದುಕು ಎನ್ನುವುದು ಸೌದಿ ಅರೇಬಿಯನ್ನರಿಗೆ ಇನ್ನು ಭೂತಕಾಲದ ಸಂಗತಿಯಾಗಲಿದೆ. ತೈಲಬೆಲೆಯಲ್ಲಿ ಕುಸಿತ ಕಾಣುತ್ತಿರುವ ಸೌದಿ ಅರೇಬಿಯದ ಸಚಿವ ಸಂಪುಟವು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೆಂಬಲಿತ ವೌಲ್ಯವರ್ಧಿತ ತೆರಿಗೆ (ವ್ಯಾಟ್) ಪ್ರಸ್ತಾಪಕ್ಕೆ ಸೋಮವಾರ ಅನುಮೋದನೆ ನೀಡಿದೆ.

ತೈಲ ಸಂಪದ್ಭರಿತ ದೇಶದ ನಿವಾಸಿಗಳು ಸುದೀರ್ಘ ಕಾಲದಿಂದ ತೆರಿಗೆ ರಹಿತ ಹಾಗೂ ಭಾರೀ ಸಬ್ಸಿಡಿಗಳ ಜೀವನ ನಡೆಸಿದ್ದರು. ಆದರೆ, 2014ರ ಬಳಿಕ ಕಚ್ಚಾತೈಲ ಬೆಲೆಯಲ್ಲಿ ಆಗಿರುವ ಕುಸಿತವು ಹಲವಾರು ಸಬ್ಸಿಡಿಗಳಿಗೆ ಖೋ ನೀಡಿದೆ ಹಾಗೂ ಸರಕಾರವು ಹೊಸ ಆದಾಯ ಮೂಲಗಳಿಗಾಗಿ ಹುಡುಕಾಡುವಂತೆ ಮಾಡಿದೆ.

ಸೌದಿ ಅರೇಬಿಯವು ಜಗತ್ತಿನ ಅತಿ ದೊಡ್ಡ ತೈಲ ರಫ್ತು ದೇಶವಾಗಿದೆ ಹಾಗೂ ಅರಬ್ ವಲಯದ ಅತಿ ದೊಡ್ಡ ಆರ್ಥಿಕತೆಯಾಗಿದೆ.

ಕಳೆದ ವರ್ಷದ ದಾಖಲೆಯ 97 ಬಿಲಿಯ ಡಾಲರ್ (6.57 ಲಕ್ಷ ಕೋಟಿ ರೂಪಾಯಿ) ಖೋತಾ ಬಜೆಟ್ ಮಂಡಿಸಿದ ಸೌದಿ ಅರೇಬಿಯ ಸರಕಾರವು, ಆದಾಯ ಮತ್ತು ವೆಚ್ಚಗಳ ನಡುವಿನ ಅಂತರವನ್ನು ತುಂಬುವುದಕ್ಕಾಗಿ ಮಹತ್ವದ ಕಟ್ಟಡ ಯೋಜನೆಗಳನ್ನು ಸ್ಥಗಿತಗೊಳಿಸಿತು ಹಾಗೂ ಸರಕಾರಿ ನೌಕರರ ವೇತನ ಹೆಚ್ಚಳವನ್ನು ಅಮಾನತಿನಲ್ಲಿಟ್ಟಿತು.

ಅದೇ ವೇಳೆ ಇಂಧನ ಮತ್ತು ಇತರ ಕ್ಷೇತ್ರಗಳಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿಗಳಲ್ಲಿ ಅಭೂತಪೂರ್ವ ಕಡಿತ ಮಾಡಿತು.

ಸೌದಿ ಸಚಿವ ಸಂಪುಟವು ‘ವೌಲ್ಯವರ್ಧಿತ ತೆರಿಗೆಗಾಗಿ ಏಕೀಕೃತ ಒಪ್ಪಂದ’ಕ್ಕೆ ಅನುಮೋದನೆ ನೀಡಲು ನಿರ್ಧರಿಸಿದೆ ಎಂದು ಅಧಿಕೃತ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಅದೇ ವೇಳೆ, ಈ ತೆರಿಗೆಯು ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಆರು ದೇಶಗಳಲ್ಲೂ ಜಾರಿಗೆ ಬರಲಿದೆ. ಆ ದೇಶಗಳೆಂದರೆ- ಬಹ್ರೈನ್, ಕುವೈತ್, ಒಮನ್, ಕತರ್, ಸೌದಿ ಅರೇಬಿಯ ಮತ್ತು ಸಂಯುಕ್ತ ಅರಬ್ ಸಂಸ್ಥಾನಗಳು (ಯುಎಇ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News