ಅಮೆರಿಕದಲ್ಲಿ ಹೆಚ್ಚಿನ ಹೂಡಿಕೆ: ಸೌದಿ ಅರೇಬಿಯ
ರಿಯಾದ್,ಫೆ.3: ಅಮೆರಿಕದಲ್ಲಿ ಹೆಚ್ಚು ಹೂಡಿಕೆ ನಡೆಸುವುದಾಗಿ ಸೌದಿಅರೇಬಿಯದ ಇಂಧನ ಸಚಿವ ಇಂಜಿನಿಯರ್ ಖಾಲಿದ್ ಅಲ್‌ಫಾಲಿಹ್ ಹೇಳಿದ್ದಾರೆ. ಟ್ರಂಪ್‌ರ ಆರ್ಥಿಕ ನೀತಿಯ ಪ್ರಕಾರ ಅಮೆರಿಕದಲ್ಲಿ ಪೆಟ್ರೋಲ್, ಅನಿಲ ಕ್ಷೇತ್ರದಲ್ಲಿಯೂ ರಿಫೈನರಿ, ಇಂಧನ ವಿತರಣೆ ಕ್ಷೇತ್ರದಲ್ಲಿಯೂ ಸೌದಿ ಹೂಡಿಕೆ ನಡೆಸುವುದು ಎಂದು ಬುಧವಾರ ಬಿಬಿಸಿಗೆ ಅವರು ತಿಳಿಸಿದ್ದಾರೆ.
ಇಂಧನ ಕ್ಷೇತ್ರದಲ್ಲಿ ಅಮೆರಿಕ ಸ್ವಸಮರ್ಥ ರಾಷ್ಟ್ರವನ್ನಾಗಿಸುವುದು ಟ್ರಂಪ್ ನೀತಿಯಾಗಿದೆ.ಈಗ ಅಮೆರಿಕದ ರಿಫೈನರಿ , ಇಂಧನ ವಿತರಣೆ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಹೊಂದಿರುವ ಸೌದಿ ಅರೇಬಿಯಕ್ಕೆ ಈ ಕ್ಷೇತ್ರದಲ್ಲಿ ಟ್ರಂಪ್ ನೀತಿಯಂತೆ ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ನಡೆಸುವ ಅವಕಾಶ ದೊರಕಿದೆ.
ಅಮೆರಿಕದ ಆರೋಗ್ಯಕರವಾದ ಮಾರುಕಟ್ಟೆ ಸ್ಪರ್ಧೆಯನ್ನು ಉಳಿಸಿಕೊಳ್ಳಲಿಕ್ಕೆ ಟ್ರಂಪ್ ಬಯಸುತ್ತಿದ್ದಾರೆ. ಸೌದಿ ಅರೇಬಿಯ ಟ್ರಂಪ್‌ರಂತಹದ್ದೇ ಹಣಕಾಸು ನೀತಿಯನ್ನು ಹೊಂದಿದೆ. ಅಮೆರಿಕದ ಹೆಚ್ಚುತ್ತಿರುವ ಇಂಧನ ಬೇಡಿಕೆಯಂತೆ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಅನಿಲಗಳನ್ನು ನೀಡಲು ಜಗತ್ತಿನ ಅತ್ಯಂತ ದೊಡ್ಡ ಪೆಟ್ರೋಲ್ ಉತ್ಪಾದಕ ರಾಷ್ಟ್ರ ಸೌದಿ ಅರೇಬಿಯಕ್ಕೆ ಸಾಧ್ಯವಾಗಲಿದೆ ಎಂದು ಫಾಲಿಹ್ ಹೇಳಿದರು.
ಇದೇ ವೇಳೆ ತೈಲ ಉತ್ಪಾದನಾ ದೇಶಗಳಾದ ಅಪೆಕ್ ಉತ್ಪಾದನೆಯನ್ನು ನಿಯಂತ್ರಿಸುವ ಬಗ್ಗೆ ನವೆಂಬರ್ 30ಕ್ಕೆ ವಿಯನ್ನ ಶೃಂಗದಲ್ಲಿ ತೆಗೆದು ಕೊಂಡಿರುವ ತೀರ್ಮಾನದ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸಲು ಸೌದಿ ಸಿದ್ಧವೆಂದು ಸಚಿವರು ಹೇಳಿದರೆಂದು ವರದಿತಿಳಿಸಿದೆ.