×
Ad

ಅಬುಧಾಬಿಯಲ್ಲಿನ ಮೂವರು ಭಾರತೀಯ ಮಕ್ಕಳಿಗೆ ಶಿಕ್ಷಣಕ್ಕೂ ತತ್ವಾರ

Update: 2017-02-04 17:38 IST

ನಿರಾದ್‌ಗೆ ಮೊನ್ನೆಯಷ್ಟೇ 10 ವರ್ಷಗಳು ತುಂಬಿವೆ. ಆದರೆ ಕೇಕ್,ಪಾರ್ಟಿ ಅಥವಾ ತನ್ನ ಸಹಪಾಠಿಗಳ ಶುಭಾಶಯಗಳು.....ಇವು ಯಾವುದೂ ಆತನ ಪಾಲಿಗಿರಲಿಲ್ಲ. ತನ್ನ ಅಕ್ಕ ಮತ್ತು ತಮ್ಮನಂತೆ ನಿರಾದ್ ಕೂಡ ಶಾಲೆಗೆ ಹೋಗುತ್ತಿಲ್ಲ. ಈ ಮಕ್ಕಳಿಗೆ ಕಲಿಯುವ ಮನಸ್ಸಿಲ್ಲ ಎಂದಲ್ಲ. ಆದರೆ ಅವರ ತಂದೆಗೆ ಶಾಲೆಯ ಖರ್ಚನ್ನು ಭರಿಸುವ ತಾಕತ್ತಿಲ್ಲ.

ಅವನ 13ರ ಹರೆಯದ ಅಕ್ಕ 2013ರಲ್ಲಿ ಮೂರನೇ ಗ್ರೇಡ್ ತಲುಪಿದ್ದಾಗ ಶಾಲೆ ಬಿಡುವಂತಾಗಿತ್ತು. ನಾಲ್ಕರ ಹರೆಯದ ತಮ್ಮ ಈವರೆಗೂ ಶಾಲೆಯ ಮುಖವನ್ನೇ ಕಂಡಿಲ್ಲ.

ಈ ಮಕ್ಕಳ ತಂದೆ, ಭಾರತದ ಉತ್ತರ ಪ್ರದೇಶದ ನಿವಾಸಿಯಾಗಿರುವ ಶಂಶೇರ್ ಸಿಂಗ್(46)ಕೆಲಸವಿಲ್ಲದೆ ಕುಳಿತು ಅದಾಗಲೇ ಒಂದು ವರ್ಷ ಕಳೆದುಹೋಗಿದೆ.

2000ರಲ್ಲಿ ಶ್ರೀಲಂಕಾ ಮೂಲದ ಫಾತುಮಾ ಫರ್ಸಾನಾಳನ್ನು ಮದುವೆಯಾದಾಗಿ ನಿಂದ ಸಿಂಗ್ ಜೀವನದಲ್ಲಿ ಸತ್ವಪರೀಕ್ಷೆಗಳನ್ನು ಎದುರಿಸುತ್ತಲೇ ಬಂದಿದ್ದಾನೆ. ತನ್ನ ಪ್ರೇಮವನ್ನು ಉಳಿಸಿಕೊಳ್ಳಲು ಆತ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ಇಸ್ಲಾಮಿಗೆ ಮತಾಂತರಗೊಂಡಿದ್ದ. ಈಗ ಆರು ಸೋದರರು ಮತ್ತು ನಾಲ್ವರು ಸೋದರಿಯರ ಸಿಂಗ್ ಕುಟುಂಬ ಆತನನ್ನು ದೂರವೇ ಇಟ್ಟಿದೆ. ಫಾತುಮಾಳ ತವರೂರು ಶ್ರೀಲಂಕಾದ ಗಾಲೆಯಲ್ಲಿ ಆಕೆಯನ್ನು ಮಮದುವೆಯಾಗಲು ಸಿಂಗ್ ಶಕೀರ್ ಆಗಿ ಬದಲಾಗಿದ್ದ.

ಅಬುಧಾಬಿಯಲ್ಲಿ 27 ವರ್ಷಗಳ ತನ್ನ ವಾಸ್ತವ್ಯದ ಅವಧಿಯಲ್ಲಿ ಸೇಲ್ಸ್‌ಮನ್, ಪರ್ಚೇಸರ್,ಟೈಮ್ ಕೀಪರ್, ಹೌಸ್‌ಕೀಪರ್, ಸೆಕ್ಯುರಿಟಿ ಸೂಪರ್‌ವೈಸರ್....ಹೀಗೆ ಶಕೀರ್ ಮಾಡದ ಕೆಲಸವಿಲ್ಲ. ವರ್ಷಗುರುಳಿದಂತೆ ಕುಟುಂಬವೂ ಬೆಳೆಯುತ್ತಿದ್ದರಿಂದ ಆತ ಒಳ್ಳೆಯ ಸಂಬಳದ ಕೆಲಸಗಳಿಗಾಗಿ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿದ್ದ. ಅಂತಿಮವಾಗಿ ಸಿಟಿ ಟ್ರಾನ್ಸ್‌ಪೋರ್ಟ್‌ನಲ್ಲಿ ಒಳ್ಳೆಯ ಕೆಲಸ ದೊರೆತು ಸಮಾಧಾನದ ನಿಟ್ಟುಸಿರು ಎಳೆಯುತ್ತಿದ್ದಾಗಲೇ ಆ ಕೆಲಸದಿಂದ ಆತನನ್ನು ತೆಗೆದುಹಾಕಲಾಗಿತ್ತು. ಇದಾದ ಬಳಿಕ ಕಳೆದ ವರ್ಷದ ಜೂನ್‌ನಿಂದ ತನ್ನ ಪತ್ನಿ ಮತ್ತು ಮಕ್ಕಳ ವೀಸಾಗಳನ್ನು ನವೀಕರಿಸಿಕೊಳ್ಳಲು ಆತನಿಗೆ ಸಾಧ್ಯವಾಗುತ್ತಿಲ್ಲ.

‘‘ನನ್ನ ಜೀವನವಿಡೀ ಬದುಕಲು ಹೋರಾಟಗಳಿಂದ ತುಂಬಿಹೋಗಿದೆ. ಯಾರದೇ ಬೆಂಬಲವಿಲ್ಲದೆ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಕುಟುಂಬವೇ ನನ್ನ ಶಕ್ತಿಯಾಗಿದೆ. ಆದರೆ ನನ್ನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ಕಂಡಾಗ ಕರುಳು ಹಿಂಡುತ್ತದೆ ’’ ಎನ್ನುತ್ತಾನೆ ಶಕೀರ್.

ಬಡತನದಿಂದಾಗಿ ಶಾಲೆಗೆ ವಿಳಂಬವಾಗಿ ಸೇರಿದ್ದ ಆತನ ಮಗಳು ಲಲೀಷಾ ಮೂರನೇ ತರಗತಿಯವರೆಗೆ ಮಾತ್ರ ಓದಿದ್ದಾಳೆ. ನಿರಾದ್ ಲೋವರ್ ಕೆಜಿಗಿಂತ ಮುಂದೆ ದಾಟಿಲ್ಲ. ಕಿರಿಯ ಪುತ್ರ ಅಕ್ಷದ್‌ಗೆ ಶಾಲೆ ಎಂದರೆ ಎನು ಎನ್ನುವುದು ಗೊತ್ತಿಲ್ಲ.

3,000-4,000 ದಿರ್ಹಮ್‌ಗಿಂತ ಹೆಚ್ಚಿನ ಸಂಬಳವನ್ನು ಶಕೀರ್ ಕಂಡೇ ಇಲ್ಲ. ಶಿಕ್ಷಣ ಸಾಲಕ್ಕಾಗಿ ಬ್ಯಾಂಕುಗಳಿಗೆ ಎಡತಾಕಿದ್ದನಾದರೂ ಅವು ಕೈಯೆತ್ತಿದ್ದವು. ಅಬುಧಾಬಿಯಲ್ಲಿ ಸಾಲ ಮಾಡಿಕೊಂಡಿರುವ ಆತ ಭಾರತಕ್ಕೂ ಮರಳುವಂತಿಲ್ಲ. ಗಾಲೆಯಲ್ಲಿರುವ ಫಾತಿಮಾಳ ಕುಟುಂಬವು ಆತನನ್ನೇ ಅವಲಂಬಿಸಿರುವುದರಿಂದ ಅಲ್ಲಿಗೂ ಹೋಗುವಂತಿಲ್ಲ. ಆತ ಇಲ್ಲಿಯೇ ಉಳಿದು ಬದುಕಿಗಾಗಿ ಹೋರಾಡಬೇಕಿದೆ. ತನ್ನ ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಸಂಕಷ್ಟದಲ್ಲಿದೆ ಎಂದು ಶಕೀರ್‌ಗೆ ಗೊತ್ತಾದಾಗ ತುಂಬ ವಿಳಂಬವಾಗಿತ್ತು.  ನಿರಾದ್ ಹೊರಗಿದ್ದರೆ ಶಾಲೆಗೇಕೆ ಹೋಗಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ. ಹೀಗಾಗಿ ಆತ ಇಡೀ ದಿನ ಕೋಣೆಯಲ್ಲಿಯೇ ಇರುತ್ತಾನೆ. ಆತ ಮನೆಯಲ್ಲಿಯೇ ಜೈಲು ಅನುಭವಿಸುವಂತಾಗಿದೆ ಎನ್ನುತ್ತಾಳೆ ಫಾತಿಮಾ.

ಶಕೀರ್ ಅಲ್ಲಿ ಇಲ್ಲಿ ಅರೆಕಾಲಿಕ ಕೆಲಸಗಳನ್ನು ಮಾಡುತ್ತಾನೆ. ಆದರೆ ಅದು ಕುಟುಂಬದ ತುತ್ತಿನ ಚೀಲಗಳನು ತುಂಬಿಸಲು ನೆರವಾಗುತ್ತಿಲ್ಲ. ತನ್ಮಧ್ಯೆ ಇನ್ನೊಂದು ಮಹಾ ಸಂಕಷ್ಟ ಶಕೀರ್ ಕುಟುಂಬಕ್ಕೆ ಕಾದಿದೆ. 6-7 ತಿಂಗಳ ಬಾಡಿಗೆಯನ್ನು ಆತ ಪಾವತಿಸಿಲ್ಲ. ಮನೆಮಾಲಿಕ ಫೆ.10ರವರೆಗೆ ಗಡುವು ನೀಡಿದ್ದಾನೆ. ಅಷ್ಟರೊಳಗೆ ಬಾಡಿಗೆ ಪಾವತಿಸದಿದ್ದರೆ ಈ ಕುಟುಂಬ ಬೀದಿಗೆ ಬೀಳಲಿದೆ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News