ಈ ಗಲ್ಫ್ ದೇಶದಲ್ಲಿ 60 ವರ್ಷದ ಅನಿವಾಸಿ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ
ಕುವೈಟ್ ಸಿಟಿ,ಫೆ.5: 60 ವರ್ಷ ವಯಸ್ಸು ಮೀರಿದ ವಿದೇಶಿಗಳಿಗೆ ಸರಕಾರಿ ಸೇವೆಗಳಿಂದ ನಿವೃತ್ತಿ ನೀಡುವ ಯೋಜನೆಯನ್ನು ಶೀಘ್ರ ಜಾರಿಗೆ ತರಲಾಗುವುದೆಂದು ವರದಿಯಾಗಿದೆ. ಪಬ್ಲಿಕ್ ಸರ್ವೀಸ್ ಕಮಿಶನ್ ಉದ್ಧರಿಸಿ ಉನ್ನತ ಸರಕಾರಿ ಮೂಲಗಳು ಈ ವಿಷಯ ಬಹಿರಂಗಪಡಿಸಿವೆ. ಇಷ್ಟರಲ್ಲೇ ಸರಕಾರಿ ಕೆಲಸಕ್ಕಾಗಿ 20,000 ಸ್ವದೇಶಿ ಯುವಕರು ಸಿವಿಲ್ ಸರ್ವೀಸ್ ಕಮಿಶನ್‌ಗೆ ಅರ್ಜಿಸಲ್ಲಿಸಿ ಕಾದಿದ್ದಾರೆ.
ಹೊಸ ಅವಕಾಶಗಳನ್ನು ಸೃಷ್ಟಿಸಿ ಇವರಿಗೆ ಕೆಲಸ ನೀಡಬೇಕಾಗಿದೆ. ಸರಕಾರಿ ಸೇವೆಯಲ್ಲಿರುವ ವಿದೇಶಿ ಉದ್ಯೋಗಿಗಳನ್ನು ತೆಗೆದು ಹಾಕಿ ಅವಕಾಶ ಸೃಷ್ಟಿಸುವುದು ಸುಲಭವಲ್ಲ. ಆದ್ದರಿಂದ ಸರಕಾರಿ ಸೇವೆಯಲ್ಲಿರುವ ವಿದೇಶಿಯರನ್ನು ಅರುವತ್ತುವರ್ಷಕ್ಕೆ ನಿವೃತ್ತಿ ಕೊಡಿಸಿದರೆ ಸಾವಿರಾರು ಹುದ್ದೆಗಳು ಖಾಲಿಯಾಗುತ್ತವೆ. ಸರಕಾರದ ಎಲ್ಲ ಇಲಾಖೆಗಳಲ್ಲಿಯೂ ಇದನ್ನು ಜಾರಿಗೊಳಿಸಲಾಗುತ್ತದೆ. ಮೊದಲು ಅಸಿಸ್ಟೆಂಟ್ ಹುದ್ದೆಗಳಲ್ಲಿರುವವರಿಗೆ ನಿವೃತ್ತಿ ನೀಡಲಾಗುತ್ತದೆ. ಈ ಕಾನೂನು ಎಲ್ಲರಿಗೂ ಅನ್ವಯವಾಗಿದ್ದು. ಯಾವುದೇ ದೇಶದವರನ್ನು ಹೊರತುಪಡಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ ಅರುವತ್ತುವರ್ಷ ದಾಟಿದ ಸ್ವದೇಶಿ ಉದ್ಯೋಗಿಗಳಿಗೆ ನಿವೃತ್ತಿಯಿಲ್ಲ. ವಯಸ್ಸಿನ ಮಿತಿಗೆ ಬರುವ ವಿದೇಶಿಯರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವುದಕ್ಕೆ ಮತ್ತು ಸೂಕ್ತವಾದ ಇತರ ಕೆಲಸವನ್ನು ಹುಡುಕುವುದಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ಹೇಳಿವೆ ಎಂದು ವರದಿಯಾಗಿದೆ.