ಬಿಜೆಪಿ ಜೊತೆಗಿನ ಮೈತ್ರಿಗೆ ಕುಮಾರಸ್ವಾಮಿ ವಿಷಾದ
ದುಬೈ, ಫೆ.5: ಜಾತ್ಯಾತೀತ ನಿಲುವಿನಲ್ಲಿ ಕಾರ್ಯಾಚರಿಸುವ ನಮ್ಮ ಪಕ್ಷವು ಹಿಂದೊಮ್ಮೆ ಬಿಜೆಪಿಯೊಂದಿಗೆ ಆಡಳಿತ ನಡೆಸಿದ್ದು ತಪ್ಪಾಗಿತ್ತು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ರಾಷ್ಟ್ರೀಯ ಸಮಿತಿಯು ದುಬೈನಲ್ಲಿ ಆಯೋಜಿಸಿದ್ದ ಗಲ್ಫ್ ಇಶಾರ ಮಾಸಿಕದ ಯುಎಇ ಆವೃತ್ತಿಯ ಪ್ರಥಮ ವಾರ್ಷಿಕೋತ್ಸವ ಹಾಗೂ ಭಾರತದ 68ನೆ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಾತ್ಯಾತೀತ ಪಕ್ಷಗಳು ಅಧಿಕಾರದಲ್ಲಿ ಇರಲಿ ಎಂಬ ಉದ್ದೇಶದಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಕಾಂಗ್ರೆಸ್‌ನೊಂದಿಗೆ ಯಾವುದೇ ಶರತ್ತಿಲ್ಲದೆ ಬೆಂಬಲ ಮೈತ್ರಿ ಮಾಡಿಕೊಳ್ಳಲಾಗಿತ್ತು. ದುರಾದೃಷ್ಟವೆಂಬಂತೆ ಜೆಡಿಎಸ್ ಪಕ್ಷವನ್ನೇ ನಿರ್ನಾಮ ಮಾಡಲು ಕೆಲವರು ಮುಂದಾದಾಗ ಅನಿವಾರ್ಯವಾಗಿ ಬಿಜೆಪಿಗೆ ಬೆಂಬಲ ನೀಡಬೇಕಾಯಿತು ಎಂದು ಅವರು ಹೇಳಿದರು.
ದೇವೇಗೌಡರ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಸರಕಾರಿ ಸೇವೆಗಳಲ್ಲಿ ಮೀಸಲಾತಿ ಜಾರಿಗೆ ತರಲಾಗಿದೆ. ದೇಶದಲ್ಲಿ ಇನ್ನಾವುದೇ ರಾಜ್ಯಗಳು ತರಲಿಲ್ಲ ಎಂದು ಅವರು ನೆನಪಿಸಿದರು.
ಹುಬ್ಬಳ್ಳಿ ಈದ್ಗಾ ಮೈದಾನದ ವಿಷಯದಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ಇತ್ಯರ್ಥ ಮಾಡಿದ್ದು ಅದರ ನಂತರ ಇಂದಿನವರೆಗೆ ಅಲ್ಲಿ ಶಾಂತಿ ನೆಲೆಸಿದೆ ಎಂದು ಅವರು ಹೇಳಿದರು.
ಗಲ್ಫ್ ರಾಷ್ಟ್ರಗಳಲ್ಲೂ ಕನ್ನಡ ಪ್ರೇಮವನ್ನು ಮೆರೆಯುತ್ತಿರುವ ಗಲ್ಫ್ ಇಶಾರ ಮತ್ತು ಕೆಸಿಎಫ್ ಕಾರ್ಯಕರ್ತರು ನಿಜಕ್ಕೂ ಶ್ಲಾಘನೀಯ ಎಂದ ಕುಮಾರಸ್ವಾಮಿ, ರಾಜ್ಯ ಎಸ್ಸೆಸ್ಸೆಫ್ ಅಧೀನದಲ್ಲಿ ಹತ್ತು ಕೇಂದ್ರಗಳಲ್ಲಿ ಕಾರ್ಯರೂಪಕ್ಕೆ ಬರಲಿರುವ ನಾಲೆಡ್ಜ್ ವಿಲೇಜ್ ಕೇಂದ್ರಗಳಿಗೆ ಆರ್ಥಿಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಸಿ.ಎಸ್.ಪುಟ್ಟರಾಜು ಮಂಡ್ಯ ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉದ್ಯಮಿ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಭಾರತದಲ್ಲಿ ಅಲ್ಪಸಂಖ್ಯಾತರ ಹೀನಾಯ ಪರಿಸ್ಥಿತಿಯ ಬಗ್ಗೆ ಸಾಚಾರ್ ಮತ್ತು ರಾಜೇಂದರ್ ಪ್ರಸಾದ್ ವರದಿಗಳು ಬಂದು ದಶಕಗಳು ಕಳೆದರೂ ಸಮುದಾಯದ ಅಭಿವೃದ್ಧಿಗೆ ನಂತರ ಬಂದ ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಚರ್ಚೆ ಅಥವಾ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು.
ಭಾರತದ ಗಣರಾಜ್ಯೋತ್ಸವ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣ ಮಾಡಿದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ.ಎಂ.ಶಾಫಿ ಸಅದಿ, ರಾಜಕೀಯವಾಗಿ ಯಾವುದೇ ಪಕ್ಷವಿರಲಿ, ಜನಪರ ಕಾರ್ಯಗಳನ್ನು ಮಾಡುವ ಯಾವುದೇ ನಾಯಕರಾಗಲಿ ಅವರಿಗೆ ಸುನ್ನಿ ಕಾರ್ಯಕರ್ತರ ಬೆಂಬಲವಿದೆ ಎಂದರು.
ರಾಜಕೀಯ ಪಕ್ಷಗಳು ಕೇವಲ ರಾಜಕಾರಣಕ್ಕೆ ಮಾತ್ರ ಮುಸ್ಲಿಮ್ ಸಮುದಾಯವನ್ನು ಬಳಸಿ ಮೂಲೆಗುಂಪು ಮಾಡುತ್ತಿದೆ. ಸಮುದಾಯದ ಉನ್ನತಿಗೆ ಅಡ್ಡಗಾಲು ಹಾಕುವವರಿಗೆ ಮತದಾನದ ಮೂಲಕ ಪ್ರತ್ಯುತ್ತರ ನೀಡುವಂತೆ ಅವರು ಕರೆ ನೀಡಿದರು.
ಸಮಾರಂಭದಲ್ಲಿ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿ ಗೌಡ, ಬಿ.ಎಂ.ಎಲ್.ಕಾಂತರಾಜು, ಮಂಜುನಾಥ ಕೋಲಾರ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ರವಿಕುಮಾರ್, ಮೈಸೂರು ವಿಶ್ವವಿದ್ಯಾನಿಲಯ ನಿವೃತ ಕುಲಪತಿ ರಂಗಪ್ಪ, ಆರ್‌ಜೆಡಿ ರಾಜ್ಯಾಧ್ಯಕ್ಷ ಯಾಕೂಬ್ ಯೂಸುಫ್ ಹೊಸನಗರ, ಉದ್ಯಮಿಗಳಾದ ಇಕ್ಬಾಲ್ ನಾವುಂದ, ಡಾ ಚಿಕ್ಕಸ್ವಾಮಿ, ಲತೀಫ್ ಮುಲ್ಕಿ, ಡಾ.ಮುಹಮ್ಮದ್ ಕಾಪು, ಎಂ.ಇ.ಮೂಳೂರು, ಫಕ್ರುದ್ದೀನ್ ಅಜ್ಮಲ್ ಗ್ರೂಪ್ ಮತ್ತಿತರರು ಉಪಸ್ಥಿತರಿದ್ದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಉಸ್ಮಾನ್ ನಾಪೋಕ್ಲು ಸ್ವಾಗತಿಸಿದರು. ಗಲ್ಫ್ ಇಶಾರ ಪ್ರಥಮ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರಿಯಾಝ್ ಕೊಂಡಂಗೇರಿ ಮತ್ತು ಆರ್.ಕೆ.ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು. ಕರೀಂ ಮುಸ್ಲಿಯಾರ್ ಶಾರ್ಜಾ ವಂದಿಸಿದರು.