×
Ad

ಕತರ್ ಏರ್‌ವೇಸ್‌ನಿಂದ ವಿಶ್ವದ ಅತ್ಯಂತ ಸುದೀರ್ಘ ವಿಮಾನಯಾನಕ್ಕೆ ಚಾಲನೆ

Update: 2017-02-05 22:37 IST

ದೋಹಾ,ಫೆ.5: ಕತರ್ ಏರ್‌ವೇಸ್ ದೋಹಾದಿಂದ ಆಕ್ಲಂಡ್‌ಗೆ ವಿಶ್ವದ ಅತ್ಯಂತ ಸುದೀರ್ಘ ವಿಮಾನಯಾನವನು ್ನರವಿವಾರ ಆರಂಭಿಸಿತು.

ದೋಹಾ ವಿಮಾನ ನಿಲ್ದಾಣದಿಂದ ನಸುಕಿನ 5:02(ಸ್ಥಳೀಯ ಕಾಲಮಾನ)ಕ್ಕೆ ತನ್ನ ಯಾನವನ್ನು ಆರಂಭಿಸಿದ ಫ್ಲೈಟ್ ನಂ.ಕ್ಯೂಆರ್ 920 ಸೋಮವಾರ ಬೆಳಿಗ್ಗೆ 7:30(ಸ್ಥಳೀಯ ಕಾಲಮಾನ)ಕ್ಕೆ ನ್ಯೂಝಿಲ್ಯಾಂಡ್‌ನ ಆಕ್ಲಂಡ್ ತಲುಪಲಿದೆ.

ಈ ಬೋಯಿಂಗ್ 777 ಯಾನವು 14,535 ಕಿ.ಮೀ.ದೂರದ ತನ್ನ ಪ್ರಯಾಣಕ್ಕೆ 16ಗಂಟೆ ಮತ್ತು 20 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳುತ್ತಿದ್ದು, 10 ಸಮಯ ವಲಯಗಳು, ಐದು ರಾಷ್ಟ್ರಗಳ ಮೂಲಕ ಸಾಗುತ್ತದೆ.

ಆದರೆ ಇಷ್ಟೊಂದು ಸುದೀರ್ಘ ಅವಧಿಯ ಯಾನವೇ ಎಂದು ಮೂಗು ಮುರಿಯುವವರು ಮರುಪ್ರಯಾಣದಲ್ಲಿ ಈ ವಿಮಾನದಲ್ಲಿದ್ದರೆ ಆ 16 ಗಂಟೆ 20 ನಿಮಿಷದ ಅವಧಿಯನ್ನು ಖಂಡಿತ ಇಷ್ಟಪಡುತ್ತಾರೆ. ಏಕೆಂದರೆ ಮರುಪ್ರಯಾಣದಲ್ಲಿ ಎತ್ತರದ ವಾತಾವರಣದಲ್ಲಿಯ ವಿಪರೀತ ಗಾಳಿಯಿಂದಾಗಿ ಆಕ್ಲಂಡ್‌ನಿಂದ ದೋಹಾ ತಲುಪಲು ಬರೋಬ್ಬರಿ 17 ಗಂಟೆ 30 ನಿಮಿಷಗಳು ಬೇಕು. ಹಾರಾಟದ ಸಮಯವನ್ನು ಪರಿಗಣಿಸಿದರೆ ಇದು ವಿಶ್ವದ ಅತ್ಯಂತ ಸುದೀರ್ಘ ಪ್ರಯಾಣಿಕ ವಿಮಾನ ಸೇವೆ ಯಾಗುತ್ತದೆ.

ರವಿವಾರ ದೋಹಾದಿಂದ ಹೊರಟ ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಆದರೆ ನಾಲ್ವರು ಪೈಲಟ್‌ಗಳು ಮತ್ತು 15 ಸಿಬ್ಬಂದಿಗಳು ವಿಮಾನದಲ್ಲಿದ್ದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ಎಮಿರೇಟ್ಸ್ ಏರ್‌ಲೈನ್ ಆರಂಭಿಸಿದ್ದ ದುಬೈ-ಆಕ್ಲಂಡ್ (14,200 ಕಿ.ಮೀ.) ಸೇವೆ ಈ ವರೆಗಿನ ಅತ್ಯಂತ ಸುದೀರ್ಘ ವಿಮಾನಯಾನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News