ದುಬೈಯ ಮೊದಲ ಮಹಿಳಾ ಪೈಲಟ್ ಶೇಖಾ ಮುಝಾಹ್ ಅಲ್ ಮಕ್ತೂಮ್
Update: 2017-02-06 21:30 IST
ದುಬೈ, ಫೆ. 6: ದುಬೈಯ ಆಡಳಿತಾರೂಢ ಕುಟುಂಬದ ಸದಸ್ಯೆಯಾಗಿರುವ ಶೇಖಾ ಮುಝಾಹ್ ಅಲ್ ಮಕ್ತೂಮ್ ಆ ದೇಶದ ಮೊದಲ ಮಹಿಳಾ ಪ್ರಯಾಣಿಕ ವಿಮಾನದ ಪೈಲಟ್ ಆಗಿದ್ದಾರೆ.
ನಿನ್ನೆ ಕುಟುಂಬದ ಇನೊಬ್ಬ ಸದಸ್ಯೆಯಾಗಿರುವ ಶೇಖಾ ಲತೀಫಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಸೋದರ ಸಂಬಂಧಿ ಶೇಖಾ ಮುಝಾಹ್‌ರ ಚಿತ್ರವೊಂದನ್ನು ಹಾಕಿದರು.
‘‘ಮುಝಾಹ್ ಮರ್ವಾನ್. ನನ್ನ ಸಹೋದರಿಯ ಮಗಳು. ನಮ್ಮ ಕುಟುಂಬದ ಮೊದಲ ಮಹಿಳಾ ಪೈಲಟ್. ಅವರು ವಾಣಿಜ್ಯ ವಿಮಾನವೊಂದರಲ್ಲಿ ಮೊದಲ ಬಾರಿಗೆ ಸಹಾಯಕ ಪೈಲಟ್ ಆಗಿ ಹಾರಾಟದಲ್ಲಿದ್ದಾರೆ. ನೀವು ಕನಸು ಕಂಡರೆ ಅದನ್ನು ಸಾಧಿಸಬಹುದು’’ ಎಂಬುದಾಗಿ ಅವರು ತನ್ನ ಸಂದೇಶದಲ್ಲಿ ಬರೆದಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.