×
Ad

ಉಳ್ಳಾಲ ನಿವಾಸಿಯನ್ನು ಬಂಧಮುಕ್ತಗೊಳಿಸಿದ ಸೋಶಿಯಲ್ ಫೋರಮ್

Update: 2017-02-09 15:22 IST

ದಮಾಮ್, ಫೆ.9: ನಿಷೇಧಿತ ಔಷಧಿ ಹೊಂದಿದ್ದ ಪ್ರಕರಣದಲ್ಲಿ ದಮಾಮ್ ವಿಮಾನ ನಿಲ್ದಾಣದಲ್ಲಿ ಸೌದಿಅರೇಬಿಯ ಪೊಲೀಸರಿಂದ ಬಂಧಿಸಲ್ಪಟ್ಟು ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಉಳ್ಳಾಲ ನಿವಾಸಿ ಫಯಾಝ್ ಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮದ ಫಲವಾಗಿ ಬಿಡುಗಡೆಗೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನಿವಾಸಿ ಭಾರತೀಯರು ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಈ ರೀತಿಯ ಪ್ರಕರಣಗಳಲ್ಲಿ ಸಿಲುಕುತ್ತಿದ್ದು ಸೌದಿಅರೇಬಿಯದ ಕಾನೂನು ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ. ಫಯಾಝ್ ಉಳ್ಳಾಲ ಅವರ ಪ್ರಕರಣದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ನೌಶಾದ್ ಕಾಟಿಪಳ್ಳ, ಇಬ್ರಾಹೀಮ್ ಕೃಷ್ಣಾಪುರ ಅವರ ತಂಡವು  ಭಾರತೀಯ ರಾಯಭಾರಿ ಕಚೇರಿಯ ಸಹಕಾರದೊಂದಿಗೆ ಪ್ರಾಯೋಜಕ ಮತ್ತು ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದೆ.

ಪ್ರಕರಣದ ವಿವರ: ಉದ್ಯೋಗ ನಿಮಿತ್ತ 3 ತಿಂಗಳ ಹಿಂದೆ ಸೌದಿ ಅರೇಬಿಯಕ್ಕೆ ತೆರಳಿದ್ದ ಉಳ್ಳಾಲದ ಇಬ್ರಾಹೀಮ್ ಎಂಬವರ ಪುತ್ರ ಫಯಾಝ್ ಉಳ್ಳಾಲ ರವರು ತನ್ನ ಚಿಕಿತ್ಸೆಗಾಗಿ ಕೆಲವೊಂದು ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರು. ದಮಾಮ್ ಕಸ್ಟಮ್ಸ್ ಅಧಿಕಾರಿಗಳು ಇದನ್ನು ಪತ್ತೆಹಚ್ಚಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದರು.

ಇದು ಅಕ್ರಮ ದ್ರವ್ಯ ಸಾಗಾಟವಾಗಿ ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಿಗೆ ಸಾಮಾನ್ಯವಾಗಿ  ಜಾಮೀನು ಅಥವಾ ಬಿಡುಗಡೆಯ ಸಾಧ್ಯತೆ ತೀರಾ ವಿರಳ. ಈ ಬಗ್ಗೆ ಮಂಗಳೂರು ಸಂಸದ ನಳಿನ್ ಕುಮಾರ್, ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೂ ಮನವಿ ಸಲ್ಲಿಸಲಾಗಿತ್ತು.

ಆದರೆ ಕಳೆದ ಮೂರು ತಿಂಗಳಿನಿಂದ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರಗತಿ ಕಾಣದಿರುವ ಹಿನ್ನೆಲೆಯಲ್ಲಿ ಸಂಬಂಧಿಕರು ಇಂಡಿಯನ್ ಸೋಶಿಯಲ್ ಫೋರಮ್ ನ್ನು ಸಂಪರ್ಕಿಸಿ ಪ್ರಕರಣದ ವಿವರವನ್ನು ಒದಗಿಸಿದ್ದರು.

ಪ್ರಕರಣವನ್ನು ದಮಾಮ್ ಭಾರತೀಯ ರಾಯಭಾರಿ ಕಚೇರಿಯಲ್ಲಿ ನೋಂದಾಯಿಸಿ, ಸಂತ್ರಸ್ತ ಫಯಾಝ್ ಉಳ್ಳಾಲರವರ ಪರವಾಗಿ ವಕಾಲತು ವಹಿಸಿಕೊಂಡು ಸೌದಿ ಪ್ರಾಯೋಜಕ ಹಾಗೂ ಜೈಲಧಿಕಾರಿಯನ್ನು ಸಂಪರ್ಕಿಸಿ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸಿದ ಫಲವಾಗಿ ಫೆಬ್ರವರಿ 6 ರಂದು ಬಿಡುಗಡೆಗೊಳ್ಳುವಂತಾಯಿತು.

ನಿಷೇಧಿತ ಮೆಡಿಸಿನ್ ಗೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯರಿಗೆ ಅಗತ್ಯ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಹಭಾಗಿತ್ವದಲ್ಲಿ ಕೈಪಿಡಿಯೊಂದನ್ನು ಹೊರತರಲು ಇಂಡಿಯನ್ ಸೋಶಿಯಲ್ ಫೋರಮ್ ಯೋಜನೆ ಹಾಕಿಕೊಂಡಿದೆ. ಸರಿಯಾದ ದಾಖಲೆ ಪತ್ರಗಳಿಲ್ಲದಿರುವ ಔಷಧಿ ಮತ್ತು ಸೌದಿಅರೇಬಿಯದಲ್ಲಿ ನಿಷೇಧವಿರುವ ಔಷಧಿಗಳನ್ನು ಜೊತೆಯಲ್ಲಿ ಒಯ್ಯದಿರುವಂತೆ ಇಂಡಿಯನ್ ಸೋಶಿಯಲ್ ಫೋರಮ್ ಮನವಿ ಮಾಡಿಕೊಂಡಿದೆ.

Writer - ಎ.ಎಂ.ಆರಿಫ್ ಜೋಕಟ್ಟೆ

contributor

Editor - ಎ.ಎಂ.ಆರಿಫ್ ಜೋಕಟ್ಟೆ

contributor

Similar News