ಜಿದ್ದಾ: ಏಳು ಶಂಕಿತ ಭಯೋತ್ಪಾದಕರ ಸೆರೆ
Update: 2017-02-12 19:15 IST
ಜಿದ್ದಾ, ಫೆ.12: ಜಿದ್ದಾದಲ್ಲಿ ಶನಿವಾರ ಸೌದಿ ಅರೆಬಿಯಾದ ಭದ್ರತಾ ಪಡೆಗಳು ನಡೆಸಿದ ಸರಣಿ ಶೋಧ ಕಾರ್ಯಾಚರಣೆಯಲ್ಲಿ ಏಳು ಮಂದಿ ಶಂಕಿತ ಭಯೋತ್ಪಾದಕರನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್-ಹಝರತ್, ಅಲ್-ಮಹಮೀದ್ ಮತ್ತು ಬನಿ ಮಲಿಕ್ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಲ್-ಹಝರತ್ ಮತ್ತು ಅಲ್-ಮಹಮೀದ್ ಜಿಲ್ಲೆಯ ನಿರ್ದಿಷ್ಟ ಪ್ರದೇಶವನ್ನು ಸುತ್ತುವರಿದ ಭದ್ರತಾ ಪಡೆಗಳು ಗುಂಡು ಹಾರಿಸಿ ಎಚ್ಚರಿಕೆ ನೀಡಿದಾಗ ನಾಲ್ಕು ಮಂದಿ ಯಾವುದೇ ಪ್ರತಿರೋಧ ತೋರದೆ ಶರಣಾಗಿದ್ದಾರೆ . ಇದೇ ರೀತಿ ಜಿದ್ದಾದ ಪ್ರಮುಖ ನಗರವಾದ ಬನಿ ಮಲಿಕ್ ಎಂಬಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಭಯೋತ್ಪಾದಕರು ಯಾವುದೇ ಪ್ರತಿರೋಧ ತೋರದೆ ಶರಣಾಗಿದ್ದಾರೆ.