ಮದೀನಾ ಟೂರಿಸಂ ಫೆಸ್ಟಿವಲ್‌ಗೆ ಚಾಲನೆ

Update: 2017-02-20 07:38 GMT

ಮದೀನ,ಫೆ. 20: ಪ್ರವಾದಿ ನಗರದ ಇತಿಹಾಸ, ಸಂಸ್ಕೃತಿ ಮತ್ತು ವರ್ತಮಾನವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿಮದೀನಾ ಇಸ್ಲಾಮಿಕ್ ಟೂರಿಸಂನ “ರಾಜಧಾನಿ” ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಒಂದುವರ್ಷಾವಧಿಯ ಉತ್ಸವಾಚರಣೆಯನ್ನು ಸೌದಿಅರೇಬಿಯ ಟೂರಿಸಂ ಕಮಿಶನ್‌ನ ಅಧ್ಯಕ್ಷ ಅಮೀರ್ ಸುಲ್ತಾನ್ ಬಿನ್ ಸಲ್ಮಾನ್ ಉದ್ಘಾಟಿಸಿದರು. ಮದೀನದ ಕಿಂಗ್ ಫಹದ್ ಸೆಂಟ್ರಲ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆದ ಉದ್ಘಾಟನಾ ಸಮಾರಂಭವು ಅವಿಸ್ಮರಣೀಯವಾಗಿತ್ತು.ವಿವಿಧ ಅರಬ್-ಇಸ್ಲಾಮಿಕ್ ದೇಶಗಳ ಆಹ್ವಾನಿತರು ಕಾರ್ಯಕ್ರಮದಲ್ಲಿಭಾಗವಹಿಸಿದರು. ಮದೀನ ನಗರದ ವಿವಿಧ ಭಾಗಗಳಲ್ಲಿ ಸಜ್ಜುಗೊಳಿಸಲಾದ ದೊಡ್ಡ ಸ್ಕ್ರೀನ್‌ನಲ್ಲಿ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಪ್ರಸಾರ ಮಾಡಲಾಯಿತು.

ಮದೀನ ಇಸ್ಲಾಮಿಕ್ ಟೂರಿಸಂನ ಕೇಂದ್ರೀಯ ಕಾರ್ಯಕ್ರಮದ ದೃಶ್ಯಾವಿಷ್ಕಾರವನ್ನು ಅಮೀರ್ ಸುಲ್ತಾನ್ ಬಿನ್ ಸಲ್ಮಾನ್ ಬಿಡುಗಡೆಗೊಳಿಸಿದರು. ವಿಶ್ವಾಸ ಮತ್ತು ಐತಿಹಾಸಿಕವಾದ ಹಲವಾರು ಕಾರಣಗಳಿಂದ ಜಗತ್ತಿನ ಮುಸ್ಲಿಮರ ಹೃದಯಕ್ಕೆ ಹತ್ತಿರವಾದ ಪ್ರದೇಶ ಮದೀನವಾಗಿದ್ದು ಆದ್ದರಿಂದ ಈವರ್ಷದ ಟೂರಿಸಂನ ರಾಜಧಾನಿಯಾಗಿ ಮದೀನವನ್ನು ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದರು. ಮಸ್ಚಿದುನ್ನಬವಿ, ಕುಬಾ ಮಸ್ಚಿದ್ ಸಹಿತ ಹಲವಾರು ಪ್ರಾರ್ಥನಾ ಕೇಂದ್ರಗಳು ಮತ್ತು ಇಸ್ಲಾಮಿಕ್ ಇತಿಹಾಸದ ಪ್ರಧಾನ ಘಟನೆಗಳಿಗೆ ಸಾಕ್ಷಿಯಾದ ಪ್ರದೇಶಗಳನ್ನು ಮದೀನ ಹೊಂದಿದೆ. ಇಲ್ಲಿಗೆ ಸಂದರ್ಶಕರನ್ನು ಮತ್ತು ಜಾಗತಿಕ ಮುಸ್ಲಿಮರನ್ನು ಅಮೀರ್ ಸುಲ್ತಾನ್ ಬಿನ್ ಸಲ್ಮಾನ್ ಸ್ವಾಗತಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News