ಮದೀನಾದಲ್ಲಿ ಶೈಕ್ ತುರ್ಕಿ ಅಲ್ ಅಲವಿಯನ್ನು ಭೇಟಿಯಾದ ಯು.ಟಿ.ಖಾದರ್

Update: 2017-02-20 16:51 GMT
Editor : ರವಿ

ಮದೀನಾ, ಫೆ.20: ಮಕ್ಕಾ ಹಾಗೂ ಮದೀನಾ ಮಸ್ಜಿದ್ ನ ಆಡಳಿತ ಸಮಿತಿ ಉಪಾಧ್ಯಕ್ಷ ಶೈಖ್ ತುರ್ಕಿ ಅಲ್ ಅಲವಿ ಅವರನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರು ಸೋಮವಾರ ಸೌದಿ ಅರೇಬಿಯಾದ ಮದೀನಾ ರೌಳಾ ಶರೀಫ್ ಮಸ್ಜಿದ್ ನ ಆಡಳಿತ ಕಚೇರಿಯಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ಶೈಖ್ ತುರ್ಕಿ ಅಲ್ ಅಲವಿಯವರಲ್ಲಿ ಮಾತನಾಡಿದ ಯು.ಟಿ.ಖಾದರ್, ಮಕ್ಕಾ ಹಾಗೂ ಮದೀನಾದಲ್ಲಿ ಯಾತ್ರಾರ್ಥಿಗಳಿಗೆ ಮಾಡಿರುವ ಉತ್ತಮ ಸೌಕರ್ಯವನ್ನು ಶ್ಲಾಘಿಸಿದರು.

ಆದರೆ, ಹೊರದೇಶದಿಂದ ಬರುವ ಪ್ರಯಾಣಿಕರು ಅದರಲ್ಲೂ ಬಡ ವೃದ್ಧರು ಮಕ್ಕಾ ಬರುವಾಗ ಜಿದ್ದಾ ವಿಮಾನ ನಿಲ್ದಾಣದಲ್ಲಿ ಹಾಗೂ ಮದೀನಾ ಬರುವವರು ಮದೀನಾ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೀಡಾಗುತ್ತಾರೆ. ವಿಮಾನ ನಿಲ್ದಾಣದ ಎಮಿಗ್ರೇಶನ್ ಕೌಂಟರ್ ನಲ್ಲಿ ಅವಶ್ಯವಿಲ್ಲದೆ ತಾಸುಗಟ್ಟಲೆ ಕಾಯಿಸಲಾಗುತ್ತದೆ. ಭಾರತದಲ್ಲಾದರೆ ಕೆಲವೇ ಕ್ಷಣದಲ್ಲಿ ಎಮಿಗ್ರೇಶನ್ ತಪಾಸಣೆ ಆಗುತ್ತದೆ. ನಂತರ ಬ್ಯಾಗೇಜ್ ಬೆಲ್ಟ್ ಕೌಂಟರ್ ನಲ್ಲೂ ಸಮಯ ವ್ಯರ್ಥವಾಗುತ್ತದೆ.

ಅದೆಲ್ಲಾ ಆಗಿ ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ಸೌದಿಯ ಅಪರಿಚಿತ ಟ್ಯಾಕ್ಸಿ ಚಾಲಕರು ಪಾಸ್'ಪೋರ್ಟ್ ಕೇಳಿ ಗೊಂದಲಕ್ಕೆ ಸಿಲುಕಿಸುತ್ತಾರೆ. ನಿಲ್ದಾಣದಲ್ಲಿ ತೊಂದರೆಗೊಳಗಾದರೆ  ಸರಿಯಾದ ಹೆಲ್ಪ್ ಡೆಸ್ಕ್ ಕೂಡಾ ಇಲ್ಲ. ಇದ್ದರೂ ಭಾಷೆ ಗೊತ್ತಿಲ್ಲ. ಇಂಗ್ಲಿಷ್, ಅರಬಿಕ್, ಫ್ರೆಂಚ್, ಉರ್ದು ಗೊತ್ತಿರುವ ಸಿಬ್ಬಂದಿ ನೇಮಿಸಿ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಬೇಕು. ಜಿದ್ದಾ ಹಾಗೂ ಮದೀನಾ ವಿಮಾನ ನಿಲ್ದಾಣಕ್ಕೆ ಪ್ರಪಂಚದ ನಾನಾ ಭಾಗದಿಂದ ಜನರು ಬರುವುದರಿಂದ ಜರೂರಾಗಿ ಈ ಸಮಸ್ಯೆಗಳಿಗೆ ಪರಿಹಾರ ಮಾಡಬೇಕೆಂದು ಯು.ಟಿ.ಖಾದರ್ ಅವರು ಶೈಖ್ ತುರ್ಕಿ ಅಲ್ ಅಲವಿಯವರನ್ನು ವಿನಂತಿಸಿದರು.

ಇದಕ್ಕುತ್ತರಿಸಿದ ತುರ್ಕಿ ಅಲ್ ಅಲವಿ ಅವರು, ಇಂತಹ ಸಮಸ್ಯೆಗಳು ವಿಮಾನ ನಿಲ್ದಾಣದಲ್ಲಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ನಿಮ್ಮ ಸಲಹೆ ಸೂಚನೆಗೆ ಕೃತಜ್ಞತೆಗಳು. ಇದರ ಬಗ್ಗೆ ಆಡಳಿತದ ಗಮನಕ್ಕೆ ತಂದು ಸರಿಪಡಿಸಲು ತೀರ್ಮಾನಿಸುವುದಾಗಿ ಅವರು ತಿಳಿಸಿದರು.

ಯು.ಟಿ.ಖಾದರ್ ಅವರ ವಿವರವನ್ನು ಗೂಗಲ್ ನಲ್ಲಿ ವೀಕ್ಷಿಸಿದ ತುರ್ಕಿ ಅಲ್ ಅಲವಿ ಅವರು ಆರೋಗ್ಯ ಸಚಿವರಾಗಿದ್ದಾಗ ಕಾರ್ಯಗತಗೊಳಿಸಿದ ಮೊಬೈಲ್ ಆಂಬುಲೆನ್ಸ್ ಯೋಜನೆಯನ್ನು ಶ್ಲಾಘಿಸಿದರು. ಅವಘಡಕ್ಕೀಡಾದಾಗ ತುರ್ತು ಅವಶ್ಯವಿರುವ ಈ ಯೋಜನೆಯನ್ನು ಮಕ್ಕಾ ಮತ್ತು ಮದೀನಾದಲ್ಲಿ ಅಳವಡಿಸುವ ಬಗ್ಗೆ ಚಿಂತಿಸಲಾಗುವುದೆಂದು ಶೈಖ್ ತುರ್ಕಿ ಅಲ್ ಅಲವಿ ಹೇಳಿದರು.

ಜುಬೈಲ್ ಅಮಾಕೋ ಗ್ರೂಪ್ ಸಿಇಓ ಹಾಗೂ ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಂ ಮುಖ್ಯಸ್ಥರಾದ ಆಸಿಫ್ ಅಮಾಕೋ, ಮೌಲಾನಾ ಮುಝಫ್ಫರ್ ಈ ಸಂದರ್ಭ ಉಪಸ್ಥಿತರಿದ್ದರು.

Writer - ರವಿ

contributor

Editor - ರವಿ

contributor

Similar News