ಯುಎಇ: ವೀಸಾ ವೆಚ್ಚವನ್ನು ಉದ್ಯೋಗಿಯೇ ಭರಿಸಬೇಕೆ? ಇಲ್ಲಿದೆ ಉತ್ತರ

Update: 2017-02-22 15:12 GMT

ಯುಎಇ, ಫೆ.22: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಉದ್ಯೋಗ ಪಡೆಯುವ ವಲಸಿಗರು ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ ತಮ್ಮ ಉದ್ಯೋಗ ವೀಸಾವನ್ನು ರದ್ದುಪಡಿಸಲು ಬಯಸಿದರೆ ವೀಸಾ ವೆಚ್ಚವನ್ನು ಉದ್ಯೋಗಿಯೇ ತನ್ನ ಉದ್ಯೋಗದಾತನಿಗೆ ನೀಡಬೇಕೇ ಎಂಬ ವಿಚಾರದಲ್ಲಿ ಹಲವರಲ್ಲಿ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ಇಲ್ಲಿದೆ ಉತ್ತರ.

ತನ್ನ ಉದ್ಯೋಗ ಗುತ್ತಿಗೆಯನ್ನು ಮುಂದುವರಿಸದೇ ಇರಲು ಒಬ್ಬ ಉದ್ಯೋಗಿ ನಿರ್ಧರಿಸಿದ್ದೇ ಆದಲ್ಲಿ ಆತನ ಉದ್ಯೋಗದಾತ ತಾನು ವೀಸಾ ವೆಚ್ಚಕ್ಕಾಗಿ ಉಪಯೋಗಿಸಿದ ಹಣವನ್ನು ಉದ್ಯೋಗಿಯಿಂದ ಪಡೆಯುವ ಹಾಗಿಲ್ಲ.
ವೀಸಾ ವೆಚ್ಚದ ಕುರಿತಾಗಿ ಉದ್ಯೋಗಿ ತನ್ನ ಮಾಲಕನಿಗೆ ಹಣ ನೀಡಬೇಕೆಂದು ಈ ದೇಶದ ಯಾವುದೇ ಕಾನೂನು ಕೂಡ ಹೇಳುತ್ತಿಲ್ಲ. ಹಾಗೇನಾದರೂ ಉದ್ಯೋಗದಾತರು ಬೇಡಿಕೆಯಿಟ್ಟಲ್ಲಿ ಅದು ಫೆಡರಲ್ ಕಾನೂನು ಸಂಖ್ಯೆ 8, 1980 ಇದರ ಅನುಚ್ಚೇಧ 60 ಇದರ ಉಲ್ಲಂಘನೆಯಾಗುತ್ತದೆ.

ಉದ್ಯೋಗಿಯೊಬ್ಬನ ವೇತನದಿಂದ ಯಾವುದೇ ಖಾಸಗಿ ಕ್ಲೇಮ್ ಗಾಗಿ ಹಣವನ್ನು ಈ ಕೆಳಗಿನ ಕಾರಣಗಳ ಹೊರತಾಗಿ ಬೇರೆ ಉದ್ದೇಶಗಳಿಗೆ ಬಳಸುವ ಹಾಗಿಲ್ಲ.

1. ವೇತನಕ್ಕಿಂತ ಹೆಚ್ಚುವರಿಯಾಗಿ ಯಾವುದೇ ಹಣ ಪಾವತಿ ಮಾಡಿದ್ದೇ ಆದಲ್ಲಿ ಹಾಗೂ ಆತನಿಗೆ ನೀಡಿದ ಸಾಲ ಮರುಪಾವತಿ ಉದ್ದೇಶಕ್ಕಾಗಿ ಆತನ ವೇತನದ ಶೇ.10ಕ್ಕಿಂತ ಅಧಿಕವಾಗದಂತೆ ಕಡಿತ ಮಾಡಬಹುದಾಗಿದೆ.

2.ಸಾಮಾಜಿಕ ಭದ್ರತೆ ಮತ್ತು ವಿಮಾ ಯೋಜನೆಗಳಿಗಾಗಿ ಕಾರ್ಮಿಕರ ವೇತನದಿಂದ ಕಡಿತಗೊಳಿಸಬಹುದಾಗಿದೆ.

3. ಪ್ರಾವಿಡಂಟ್ ಫಂಡ್ ಅಥವಾ ಸಾಲ ಮರುಪಾವತಿಗಾಗಿ ವೇತನದಿಂದ ಕಡಿತ ಮಾಡಬಹುದಾಗಿದೆ.

4. ಕಲ್ಯಾಣ ಯೋಜನೆಗಾಗಿ ದೇಣಿಗೆ ಮತ್ತು ಕಾರ್ಮಿಕ ಇಲಾಖೆಯಿಂದ ಅನುಮೋದಿತ ಯಾವುದೇ ಸೌಲಭ್ಯವನ್ನು ಮಾಲಕ ನೀಡುವುದಿದ್ದರೆ ಅದನ್ನು ವೇತನದಿಂದ ಕಡಿತ ಮಾಡಬಹುದಾಗಿದೆ.

5. ಉದ್ಯೋಗ ಸ್ಥಳದಲ್ಲಿ ಉದ್ಯೋಗಿ ಯಾವುದೇ ತಪ್ಪು ಮಾಡಿದ್ದಲ್ಲಿ ದಂಡ ಮೊತ್ತ.

6. ನ್ಯಾಯಾಲಯದ ಆದೇಶದಂತೆ ಉದ್ಯೋಗಿ ಪಡೆದಿರುವ ಯಾವುದೇ ಸಾಲ ಮರುಪಾವತಿಗಾಗಿ. ಆದರೆ ಇಲ್ಲಿ ವೇತನದ ನಾಲ್ಕನೆ ಒಂದಂಶಕ್ಕಿಂತ ಹೆಚ್ಚಿನ ಕಡಿತ ಮಾಡುವಂತಿಲ್ಲ. ಒಂದು ವೇಳೆ ಆತ ಹಲವಾರು ಸಾಲ ಪಡೆದಿದ್ದೇ ಆಗಿದ್ದಲ್ಲಿ ಹೆಚ್ಚೆಂದರೆ ಉದ್ಯೋಗಿಯ ಅರ್ಧ ವೇತನವನ್ನು ಕಡಿತಗೊಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News