ಸೌದಿ ಅರೇಬಿಯದ ಈ ಅಕ್ಕಿ ಜಗತ್ತಿನಲ್ಲೆ ಪ್ರಸಿದ್ಧ

Update: 2017-02-28 11:35 GMT

ದಮ್ಮಾಮ್,ಫೆ. 28: ಅಲ್ ಅಹ್ಸಾ ಸೌದಿ ಅರೇಬಿಯದಆಹಾರ ತಟ್ಟೆಯಾಗಿದೆ. ಈ ದೇಶದ ಒಟ್ಟು ಆಹಾರೋತ್ಪಾದನೆಯಲ್ಲಿ ನಾಲ್ಕರಲ್ಲೊಂದು ಭಾಗ ಅಲ್‌ಅಹ್ಸಾದ ಕೊಡುಗೆಯಾಗಿದೆ. ದೇಶದ ಪೂರ್ವ ವಲಯದ ಪ್ರಕೃತಿ ವಿಸ್ಮಯ ಯುನೆಸ್ಕೊದ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ. ಸುಮಾರು 10,000 ಹೆಕ್ಟೇರ್‌ಗೂ ಹೆಚ್ಚು ವಿಸ್ತಾರವಾದ ಕೃಷಿ ಭೂಮಿ ಇಲ್ಲಿದೆ. ಹಸಾವಿ ಎನ್ನುವ ಸ್ವಂತ ಭತ್ತದ ತಳಿಯನ್ನು ಅಲ್ ಅಹ್ಸಾ ಹೊಂದಿದೆ. ಇಲ್ಲಿ ಬೆಳೆಯುವ ಹಸಾವಿ ಕೆಂಪು ಅಕ್ಕಿಗೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬೆಲೆಯಿದೆ. ಈಗ ಸೌದಿ ಅರೇಬಿಯದಲ್ಲಿ ಹಸಾವಿ ಅಕ್ಕಿ ಕಿಲೋಗೆ 50 ರಿಯಲ್‌ಗಿಂತ ಹೆಚ್ಚು ರೇಟಿದೆ.

ಅಹ್ಸಾದ ವಿಶೇಷ ಹವಾಮಾನದಲ್ಲಿ ಅಲ್ಲಿನದ್ದೇ ರೀತಿಯಲ್ಲಿ ಭತ್ತ ಬೆಳೆಯಲಾಗುತ್ತದೆ. ಹಸಾವಿ ಬೆಳೆಯ ಪೋಷಣೆ ಸ್ವಲ್ಪ ಕಷ್ಟಕರವೂ ಹೌದು. ಖರ್ಜೂರಗಳ ಮರಗಳ ನಡುವೆ ಈ ಬೆಳೆಯನ್ನು ಬೆಳೆಯಲಾಗುತ್ತದೆ. ನಾಟಿಯಾದ ಬಳಿಕ ವಾರದಲ್ಲಿ ಐದು ದಿವಸ ನೀರಾವರಿ ಆಗಲೇ ಬೇಕು. ನಾಲ್ಕು ತಿಂಗಳಲ್ಲಿ ಹಸಾವಿ ಭತ್ತ ಕೊಯ್ಲಿಗೆ ಬರುತ್ತದೆ. ಸಾಮಾನ್ಯವಾಗಿ ಹೆಚ್ಚು ತಾಪಮಾನ ಪ್ರದೇಶದಲ್ಲಿ ಹಸಾವಿ ಚೆನ್ನಾಗಿ ಬೆಳೆಯುತ್ತದೆ. ತಾಪಮಾನ 48 ಡಿಗ್ರಿಯಾದರೆ ಹೆಚ್ಚು ಇಳುವರಿ ಮತ್ತು ರುಚಿರುಚಿಯಾದ ಅಕ್ಕಿಯನ್ನು ಪಡೆಯಬಹುದು. ತಾಪಮಾನ ಕಡಿಮೆ ಆದರೆ ಗುಣಮಟ್ಟವೂ ಕಡಿಮೆಯಾಗುತ್ತದೆ. ತಾಪ ಮತ್ತು ನೀರಾವರಿ ಸರಿಯಾಗಿ ಇರಬೇಕಾಗಿದೆ. ಹಸಾವಿಯ ಬೇರುಗಳು ಹೆಚ್ಚು ಸಮಯ ನೀರಿನ ಪಸೆಯನ್ನು ಕಾಪಾಡಿಟ್ಟುಕೊಳ್ಳುತ್ತವೆ. ಆದ್ದರಿಂದ ಸರಿಯಾದ ಜಲಾಂಶ ಇರುವ ಸ್ಥಳಗಳಲ್ಲಿ ಅಲ್‌ಅಹ್ಸದ ರೈತರು ಕೃಷಿಮಾಡುತ್ತಾರೆ.

ನೀರಿನ ಕೊರತೆ ಹಸಾವಿ ಕೃಷಿಗೂ ಬಾಧಿಸಿದೆ. ವರ್ಷವರ್ಷವೂ ಭತ್ತದ ಗದ್ದೆಗಳ ಪ್ರಮಾಣದಲ್ಲಿ ಇಳಿಮುಖವಾಗುತ್ತಲೇ ಇವೆ. ಹಸಾವಿ ಪೊಷಕಾಂಶ ಸಮೃದ್ಧವಾದ ಅಕ್ಕಿಯಾಗಿದೆ. ಕಾರ್ಬೊ ಹೈಡ್ರೇಟ್ಸ್, ಪ್ರೊಟೀನ್, ಫೈಬರ್ ಮುಂತಾದ ಮಿಶ್ರಣ ಅದರಲ್ಲಿದೆ. ವಾತ, ಎಲುಬುರೋಗಗಳಿಗೆ ಅದು ಬಹುದೊಡ್ಡ ಗುಣೌಷಧವಾಗಿದೆ. ಬಾಣಂತಿಗಳಿಗೆ ಹಸಾವಿ ಅಕ್ಕಿಯ ಆಹಾರಗಳನ್ನು ನೀಡಲಾಗುತ್ತದೆ. ಅದರಿಂದ ಅವರ ಆರೋಗ್ಯ ಚೇತರಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಹಸಾವಿ ಅಕ್ಕಿ ಮಾರುಕಟ್ಟೆಗೆ ಬರುತ್ತಿದೆ. ಅಕ್ಕಿಯ ಮಹತ್ವ ಅರಿತವರು ಅಲ್‌ಅಹ್ಸಾಕ್ಕೆ ಬಂದು ಅಕ್ಕಿಯನ್ನು ಖರೀದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News