ಅಜ್ಮಾನ್: ಕೆಲಸವಿಲ್ಲ,ಊಟವಿಲ್ಲ - ಹಸಿವೆಯಿಂದಲೇ ದಿನದೂಡುತ್ತಿರುವ ಕೋಲ್ಕತಾ ದ ಕಾರ್ಮಿಕರು

Update: 2017-02-28 12:12 GMT
ಸಾಂದರ್ಭಿಕ ಚಿತ್ರ

ಅಜ್ಮಾನ್,ಫೆ.28: ಕೆಲಸ ಅರಸಿ ಯುಎಇಯ ಅಜ್ಮಾನ್‌ತಲುಪಿರುವ ಕೋಲ್ಕತಾದ ಆರು ಕಾರ್ಮಿಕರು ಕೆಲಸ, ಊಟ-ವಸತಿಯಿಲ್ಲದೆ ಕಂಗೆಟ್ಟಿರುವ ವಿಚಾರ ತಿಳಿದು ಬಂದಿದೆ.

 11,000 ರೂ.ನ್ನು ನೀಡಿ ಟೂರಿಸ್ಟ್ ವೀಸಾದೊಂದಿಗೆ ಆಗಮಿಸಿದ್ದ ಇವರು ಕಳೆದ ಒಂದು ತಿಂಗಳಿನಿಂದ ತೀವ್ರ ಕಷ್ಟವನ್ನುಅನುಭವಿಸುತ್ತಿದ್ದಾರೆ.

 ಅಜ್ಮಾನಿನ ಒಂದು ಗುತ್ತಿಗೆ ಕಂಪೆನಿಯಲ್ಲಿ ಪ್ಲಂಬರ್ ಹಾಗೂ ಕಟ್ಟಡ ನಿರ್ಮಾಣ ಕೆಲಸದ ವಾಗ್ದಾನವನ್ನುಇವರಿಗೆ ನೀಡಲಾಗಿತ್ತು.ಆಚೀಚೆ ನಡೆದಾಡಲು ಸಾಧ್ಯವಿಲ್ಲದ ಒಂದು ಸಣ್ಣಕೋಣೆಯಲ್ಲಿ 25ರಷ್ಟು ಕಾರ್ಮಿಕರು ವಾಸಿಸುತ್ತಿದ್ದು, ಕೆಲವು ಕಾರ್ಮಿಕರಿಗೆ ಮಾತ್ರವೇ ಪ್ರತಿ ದಿನ ಕೆಲಸವಿರುತ್ತದೆ ಎಂದು ತೊಂದರೆಗೊಳಗಾದ ಕಾರ್ಮಿಕರು ಹೇಳಿದ್ದಾರೆ.

ಮಂಬೈ ವಿಮಾನ ನಿಲ್ದಾಣದ ಮೂಲಕ ಇವರು ದುಬೈಗೆ ಆಗಮಿಸಿದ್ದರು.ಟೂರಿಸ್ಟ್ ವೀಸಾದಲ್ಲಿ ತೆರಳುವ ವೇಳೆ ಅಗತ್ಯವಾಗಿ ಕೈಯಲ್ಲಿ ಇರಬೇಕಾದ ರಿಟರ್ನ್‌ ಟಿಕೆಟ್‌ನ್ನು ಯುಎಇಗೆ ತಲುಪಿದ ಬಳಿಕ ರದ್ದುಗೊಳಿಸಲಾಗಿತ್ತು.ಆದ್ದರಿಂದ ಊರಿಗೆ ಮರಳುವ ಸ್ಥಿತಿಯಲ್ಲಿ ಇವರು ಸದ್ಯಇಲ್ಲ. ಹೇಗಾದರೂ ಮಾಡಿ ಯಾರಾದರೂ ತಮ್ಮನ್ನು ಊರಿಗೆ ತಲುಪಿಸಿದರೆ ಸಾಕು ಎಂಬ ಬೇಡಿಕೆಯನ್ನುಇವರು ಮುಂದಿಟ್ಟಿದ್ದಾರೆ.

ಇದೀಗ ನೆಲೆಸುತ್ತಿರುವ ಸ್ಥಳಕ್ಕೆ ಸಮೀಪದ ಸಣ್ಣ ಹೊಟೇಲೊಂದರಿಂದ ಉಚಿತವಾಗಿ ರೊಟ್ಟಿ(ಕುಬ್ಬೂಸ್) ಮಸೀದಿಯಿಂದ ನೀರು ಕುಡಿದು ಇವರು ಬದುಕುತ್ತಿದ್ದಾರೆ.

 ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ತಮ್ಮನ್ನು ನಿಂದಿಸಲಾಗುತ್ತಿದ್ದು, ಉದ್ಯೋಗಧಾತನ ಜೊತೆ ಸಂಪರ್ಕವಿಟ್ಟುಕೊಂಡಿರುವ ಜನರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ಅನುಭವಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ತನ್ಮಧ್ಯೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಜನ ಬೇಕಾಗಿದ್ದು, ಅದನ್ನು ಮಾಡಲು ಇವರು ತಯಾರಾಗುವುದಿಲ್ಲ ಎಂದು ಉದ್ಯೋಗಧಾತನ ಪ್ರತಿನಿಧಿ ಆರೋಪಿಸಿದ್ದಾರೆ.

ತಮಗೆ ಸಾಧ್ಯವಿಲ್ಲದ ಕೆಲಸವನ್ನು ಮಾಡುವುದಾದರೂ ಹೇಗೆ ಎಂದು ಕಾರ್ಮಿಕರು ಪ್ರಶ್ನಿಸುತ್ತಾರೆ.ಊಟಕ್ಕೆ ಹಣವನ್ನು ನೀಡದಿರುವುದರಿಂದ ಹಸಿವು ತಾಳಿಕೊಳ್ಳಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

 ಕೆಲಸ ಮಾಡಲು ಆಸಕ್ತಿಯಿಲ್ಲದಿದ್ದರೆ ವಿಮಾನದ ಟಿಕೇಟ್ ವ್ಯವಸ್ಥೆಯನ್ನು ಮಾಡಿ ಊರಿಗೆ ಕಳುಹಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಉದ್ಯೋಗಧಾತ ಹೇಳಿದ್ದಾರೆ. ಸ್ವಂತವಾಗಿ ಕೈಯಿಂದ ಹಣ ನೀಡಿ ವಿಮಾನ ಟಿಕೆಟ್ ಪಡೆದುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಈ ಕಾರ್ಮಿಕರಿದ್ದಾರೆ. ವೀಸಾ ಅವಧಿ ಮುಗಿಯುವುದಕ್ಕಿಂತ ಮುಂಚೆ ಊರಿಗೆ ಮರಳದೆ ಇದ್ದರೆ ದಂಡ ಪಾವತಿಸಬೇಕಾಗಿರುವುದರಿಂದ ಇದರಿಂದ ಹೇಗಾದರೂ ಪಾರಾಗಬೇಕು ಎಂದು ಕಾರ್ಮಿಕರು ನಿಶ್ಚಯಿಸಿದ್ದಾರೆ.

Writer - ವರದಿ : ಸಿರಾಜ್ ಅರಿಯಡ್ಕ

contributor

Editor - ವರದಿ : ಸಿರಾಜ್ ಅರಿಯಡ್ಕ

contributor

Similar News