ಈ ನಿಯಮ ಪಾಲಿಸದಿದ್ದರೆ ದುಬೈಯಲ್ಲಿ ನಿಮ್ಮ ಲಗೇಜು ಪಾಸಾಗದು

Update: 2017-03-02 10:28 GMT

ದುಬೈ,ಮಾ. 2 : ದುಬೈ ವಿಮಾನ ನಿಲ್ದಾಣ ಸದ್ಯದಲ್ಲೇ ಹೊಸ ಲಗೇಜು ನಿಮಯಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಕ್ರಮದಿಂದ ಲಗೇಜು ಚೆಕ್-ಇನ್, ತಪಾಸಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನೆರವಾಗುವುದು ಎಂದು ಹೇಳಲಾಗಿದೆ.‘

‘ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದಲ್ಲಿಯೇ ಅತ್ಯಾಧುನಿಕ ಬ್ಯಾಗೇಜ್ ಸಿಸ್ಟಂ ಹೊಂದಿದೆ,’’ ಎಂದು ನಿಲ್ದಾಣವು ಟರ್ಮಿನಲ್ ಆಪರೇಶನ್ಸ್ ಇದರ ಉಪಾಧ್ಯಕ್ಷ ಅಲಿ ಅಂಜಿಝೆಹ್ ಹೇಳಿದ್ದಾರೆ. ‘‘ಆದರೆ ಎಷ್ಟೇ ಮುಂದುವರಿದ ತಂತ್ರಜ್ಞಾನವನ್ನು ಬಳಸಿದರೂ ದೊಡ್ಡ ಗಾತ್ರದ ಬ್ಯಾಗುಗಳು ಬಂದಾಗ ಸಮಸ್ಯೆಗಳು ಎದುರಾಗಿಯೇ ಎದುರಾಗುತ್ತವೆ.

ಉರುಟಾಗಿರುವ ಬ್ಯಾಗುಗಳು ಅಥವಾ ಅಡಿ ಭಾಗ ಚಪ್ಪಟೆಯಾಗಿರದ ಬ್ಯಾಗುಗಳಿದ್ದರೆ ಅವುಗಳು ಸಮಸ್ಯೆಯೊಡ್ಡುವ ಸಂಭವವಿದೆ. ಇದರಿಂದ ಬ್ಯಾಗೇಜ್ ಸಿಸ್ಟಂ ತಾಂತ್ರಿಕ ಅಡಚಣೆಯೆದುರಿಸಿ ಪ್ರಯಾಣಿಕರಿಗೆ ಅವರ ಬ್ಯಾಗೇಜುಗಳನ್ನು ಹಿಂದಿರುಗಿಸುವಲ್ಲಿ ಅಥವಾ ಅವುಗಳನ್ನು ವಿಮಾನದಲ್ಲಿರಿಸುವಲ್ಲಿ ವಿಳಂಬವಾಗಬಹುದು,’’ ಎಂದು ಅವರು ಹೇಳಿದ್ದಾರೆ.

ಮಾರ್ಚ್ 8, 2017ಕ್ಕೆ ಅನ್ವಯವಾಗುವಂತೆ ಅಡಿ ಭಾಗ ಚಪ್ಪಟೆಯಿಲ್ಲದ ಬ್ಯಾಗುಗಳನ್ನು ಹೊಸ ನಿಯಮದಂತೆ ಚೆಕ್-ಇನ್ ಸಂದರ್ಭದಲ್ಲಿ ತಿರಸ್ಕರಿಸಲಾಗುವುದು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸೇವೆಯೊದಗಿಸುವ ಎಲ್ಲಾ ಏರ್ ಲೈನ್ ಕಂಪೆನಿಗಳಿಗೂ ಈ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಲಾಗಿದೆಯಲ್ಲದೆ ಈ ಬಗ್ಗೆ ನಿಲ್ದಾಣದ ವೆಬ್ ಸೈಟಿನಲ್ಲೂ ಮಾಹಿತಿ ನೀಡಲಾಗಿದೆ.

ನಿಲ್ದಾಣದ ಮೊಬೈಲ್ ಆ್ಯಪ್ ಹಾಗೂ ಇತರ ಸೂಚನಾ ಫಲಕದಲ್ಲೂ ವಿವರಗಳನ್ನು ನೀಡಿ ಪ್ರಯಾಣಿಕರಲ್ಲಿ ಹೊಸ ನಿಯಮದ ಬಗ್ಗೆ ಅರಿವನ್ನುಂಟು ಮಾಡಲಾಗಿದೆ.‘‘ಆದಷ್ಟು ಹೆಚ್ಚು ಜನರಿಗೆ ಈ ನಿಯಮದ ಮಾಹಿತಿ ತಲುಪುವಂತೆ ನಾವು ಮಾಡುತ್ತಿದ್ದೇವೆ,’’ ಎಂದು ಅಂಗಿಝೆಹ್ ಹೇಳಿದ್ದಾರೆ. ‘‘ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿರುವಂತಹ ಬ್ಯಾಗುಗಳನ್ನು ಪ್ರಯಾಣಿಕರು ತಂದಿದ್ದರೂ ಅವರ ಬ್ಯಾಗುಗಳಲ್ಲಿನ ವಸ್ತುಗಳನ್ನು ಒಂದು ನಿಗದಿತ ಮೊತ್ತಕ್ಕೆ ಬೇರೆ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡುವ ಅವಕಾಶವೂ ಇದೆ,’’ ಎಂದು ಅವರು ಮಾಹಿತಿ ನೀಡಿದ್ದಾರೆ.

140 ಕಿಮೀ ವಿಸ್ತೀರ್ಣದ ಒಟ್ಟು 75 ಫುಟ್ಬಾಲ್ ಮೈದಾನಗಳಷ್ಟು ದೊಡ್ಡದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬ್ಯಾಗೇಜ್ ನಿರ್ವಹಣಾ ವ್ಯವಸ್ಥೆಯು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾಗಿದೆ.

ಈ ವ್ಯವಸ್ಥೆಯಡಿ ಒಟ್ಟು 15,000 ಟ್ರೇಗಳಿವೆ ಹಾಗೂ ಇವುಗಳಿಗೆ 21,000 ಮೋಟಾರುಗಳಿವೆ. ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ಒಟ್ಟು 93 ಲಕ್ಷ ಬ್ಯಾಗುಗಳ ತಪಾಸಣೆ ಅದು ನಡೆಸಿದೆ. ಒಂದು ಬ್ಯಾಗ್ ಇಲ್ಲಿನ ಬ್ಯಾಗೇಜ್ ಸಿಸ್ಟಂನಲ್ಲಿ ಸರಾಸರಿ 29 ನಿಮಿಷವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News