ಅಬುದಾಬಿಯಲ್ಲಿ 13 ಕೋಟಿ ರೂ. ಬಹುಮಾನ ಗೆದ್ದ ಭಾರತೀಯ!
ಅಬುದಾಬಿ,ಮಾ.6: ಭಾರತೀಯ ಮೂಲದ ಸೀರಜ್ ಕೃಷ್ಣನ್ ಕೊಪ್ಪರೆಂಬಿಲ್ ಅವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಿದ್ದರು. ಹೇಗೆ ಗೊತ್ತೇ?
ಶಿಪ್ಪಿಂಗ್ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಸೀರಜ್ (33) ಅಬುದಾಬಿ ಬಿಗ್ ಟಿಕೆಟ್ ಡ್ರಾದಲ್ಲಿ ಏಳು ದಶಲಕ್ಷ ದಿರ್ಹಂ ಮೌಲ್ಯದ ಬಹುಮಾನ ಗೆದ್ದಿರುವುದನ್ನು ರವಿವಾರ ಪ್ರಕಟಿಸಲಾಗಿದೆ.
"ಬಿಗ್ ಟಿಕೆಟ್‌ನಿಂದ ನನಗೆ ಕರೆ ಬಂದಾಗ ನಾನು ಒಂದು ಕ್ಷಣ ಅಚ್ಚರಿಯಾಯಿತು. ಇಂದಿಗೂ ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕಳೆದ ಒಂಬತ್ತು ವರ್ಷಗಳಿಂದ ಯುಎಇನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಕೃಷ್ಣನ್ ವಿವರಿಸಿದರು.
"44698 ನನ್ನ ಅದೃಷ್ಟಸಂಖ್ಯೆ ಎನ್ನುವುದು ನನಗೆ ಖಾತ್ರಿಯಾಗಿದೆ". ಕೃಷ್ಣನ್ ಬಿಗ್ ಟಿಕೆಟ್‌ನ ಖಾಯಂ ಗ್ರಾಹಕರಾಗಿದ್ದರೂ, ಇದಕ್ಕೂ ಮುನ್ನ ಯಾವ ಬಹುಮಾನವನ್ನೂ ಗೆದ್ದಿರಲಿಲ್ಲ. ಈ ಬಾರಿ ಟಿಕೆಟ್ ಖರೀದಿಸಿದ ನಾನು ಇದು ನಾನು ಕೊನೆಯ ಬಾರಿ ಖರೀದಿಸುತ್ತಿರುವ ಟಿಕೆಟ್ ಎಂದು ಮನಸ್ಸಿನಲ್ಲೇ ನಿರ್ಧರಿಸಿದ್ದೆ. ಕೊನೆಯ ಖರೀದಿಯಲ್ಲಿ ಅದೃಷ್ಟ ನನ್ನ ಪರವಾಗಿತ್ತು" ಎಂದು ಮಾಸಿಕ 6,000 ದಿರ್ಹಂ ವೇತನ ಪಡೆಯುತ್ತಿರುವ ಕೃಷ್ಣನ್ ಅನುಭವ ಹಂಚಿಕೊಂಡರು.
ಈ ಹಣದಿಂದ ಏನು ಮಾಡಲು ಬಯಸಿದ್ದಾರೆ ಗೊತ್ತೇ? "ನನ್ನ ಮೊದಲ ಆದ್ಯತೆ ಭಾರತಕ್ಕೆ ಹೋಗಿ ನನ್ನ ಗೃಹಸಾಲ ತೀರಿಸುವುದು. ಏಕೆಂದರೆ ಅದು ನನ್ನ ಪತ್ನಿಯ ಇಚ್ಛೆ" ಎಂದು ಹೇಳಿಕೊಂಡಿದ್ದಾರೆ. ಇವರ ಪತ್ನಿ ಅಶ್ವಿನಿ ಖಾಸಗಿ ಕಂಪೆನಿಯೊಂದರಲ್ಲಿ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟಾಗಿಯೂ ಯುಎಇನಲ್ಲೇ ಮುಂದುವರಿಯುವುದಾಗಿ ದಂಪತಿ ಸ್ಪಷ್ಟಪಡಿಸಿದ್ದು, "ಇಂಥ ಅದೃಷ್ಟ ತಂದ ದೇಶವನ್ನು ನಾವು ಯಾಕೆ ತೊರೆಯಬೇಕು?" ಎಂದು ಪ್ರಶ್ನಿಸಿದ್ದಾರೆ.