ರೈಲ್ವೆ ಆಧುನೀಕರಣದಲ್ಲಿ ಹಣ ಹೂಡುವಂತೆ ಯುಎಇಗೆ ಭಾರತ ಮನವಿ

Update: 2017-03-08 14:38 GMT

ದುಬೈ, ಮಾ. 8: ಭಾರತವು ತನ್ನ ರೈಲು ಜಾಲವನ್ನು ಆಧುನೀಕರಿಸಲು ಮುಂದಿನ ಐದು ವರ್ಷಗಳಲ್ಲಿ 140 ಬಿಲಿಯ ಡಾಲರ್ (ಸುಮಾರು 9,34,135 ಕೋಟಿ ರೂಪಾಯಿ) ಹೂಡಿಕೆ ಮಾಡಲಿದೆ ಹಾಗೂ ಈ ನಿಟ್ಟಿನಲ್ಲಿ ಯುಎಇಯಲ್ಲಿರುವ ಹಣಕಾಸು ಸಂಸ್ಥೆಗಳೊಡನೆ ಮಾತುಕತೆಗಳಲ್ಲಿ ತೊಡಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

‘‘ನಾವು ಹೂಡಿಕೆ ಮಾಡುವ ಮೊತ್ತದ ಹೆಚ್ಚಿನ ಪಾಲು ಆಧುನೀಕರಣ ಕ್ರಮಗಳು, ನೂತನ ತಂತ್ರಜ್ಞಾನಗಳ ಅನುಷ್ಠಾನ ಮತ್ತು ಸಾಮರ್ಥ್ಯ ವೃದ್ಧಿಗೆ ಹೋಗುತ್ತದೆ’’ ಎಂದು ಪ್ರಭು ಹೇಳಿದರು.

ತನ್ನ ಕಚೇರಿಯು ಈ ವಾರ ಯುಎಇಯಲ್ಲಿರುವ ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆಗಳಲ್ಲಿ ತೊಡಗಿದೆ ಎಂದು ಪ್ರಭು ಹೇಳಿರುವುದಾಗಿ ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

‘‘ಭಾರತೀಯ ಮೂಲಸೌಕರ್ಯ ಕ್ಷೇತ್ರ, ಅದರಲ್ಲೂ ಮುಖ್ಯವಾಗಿ ರೈಲ್ವೆಯಲ್ಲಿ ಲಭ್ಯವಿರುವ ಬೃಹತ್ ಹೂಡಿಕೆ ಸಾಧ್ಯತೆಗಳ ಬಗ್ಗೆ ಗಮನ ಹರಿಸುವಂತೆ ನಾವು ಯುಎಇ ಸರಕಾರಕ್ಕೆ ಮನವಿ ಮಾಡಿದ್ದೇವೆ. ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಅವರು ಉತ್ಸುಕರಾಗಿದ್ದಾರೆ’’ ಎಂದು ರೈಲ್ವೆ ಸಚಿವರು ತಿಳಿಸಿದರು.

‘‘ಮುಬಾದಲ ಮತ್ತು ಅಬುಧಾಬಿ ಇನ್‌ವೆಸ್ಟ್‌ಮೆಂಟ್ ಅಥಾರಿಟಿ (ಎಡಿಐಎ)ಗಳ ಜೊತೆಗಿನ ನಮ್ಮ ಮಾತುಕತೆ ಫಲಪ್ರದವಾಗಿದೆ’’ ಎಂದು ಹೇಳಿದ ಅವರು, 2017ರಲ್ಲಿ ಈ ಮಾತುಕತೆಗಳು ಮುಂದುವರಿಯಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News