ಸೌದಿ ಅರೇಬಿಯ: ಅತ್ಯಾಚಾರ ಆರೋಪಿಗೆ ಮರಣದಂಡನೆ ಜಾರಿ
Update: 2017-03-10 14:10 IST
ದಮ್ಮಾಮ್, ಮಾ.10: ಅತ್ಯಾಚಾರ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ಸೌದಿ ಗೃಹಸಚಿವಾಲಯ ತಿಳಿಸಿದೆ. ಪೂರ್ವ ಪ್ರಾಂತ ದಮ್ಮಾಮ್ ನ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.
ಅಲಿ ಇಬ್ನು ವಾಇದ್ ಮುದಾವಿ ಎನ್ನುವ ಸ್ವದೇಶಿ ಪ್ರಜೆಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಅಪಹರಿಸಿ ಅತ್ಯಚಾರ ಮಾಡಿದ್ದಾನೆ ಎಂದು ಆತನ ವಿರುದ್ಧ ಆರೋಪ ಇತ್ತು. ಒಂದು ತಿಂಗಳ ಹಿಂದೆಯಷ್ಟೇ ಈತನ ವಿರುದ್ಧ ಪ್ರಕರಣದಾಖಲಾಗಿತ್ತು.
ವಿಶೇಷ ಭದ್ರತಾ ವಿಭಾಗದ ಅಧೀನದಲ್ಲಿ ನಡೆದ ತನಿಖೆಯಲ್ಲಿ ಪ್ರಕರಣದ ವಿಚಾರಣೆ ತ್ವರಿತ ಗತಿಯಲ್ಲಿ ನಡೆದಿತ್ತು. ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟು ಎತ್ತಿಹಿಡಿದ್ದರಿಂದ ಅತ್ಯಾಚಾರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.