×
Ad

ಕತರ್ ಇಂಡಿಯಾ ಸೋಶಿಯಲ್ ಫೋರಂ ವತಿಯಿಂದ ರಕ್ತದಾನ ಶಿಬಿರ

Update: 2017-03-11 19:57 IST

ದೋಹಾ ಕತರ್, ಮಾ.11: ಕತರ್ ಇಂಡಿಯಾ ಸೋಶಿಯಲ್ ಫೋರಂ (QISF) ಮತ್ತು ಹಮದ್ ಮೆಡಿಕಲ್ ಕಾರ್ಪೋರೇಶನ್ (HMC) ಯ ಜಂಟಿ ಸಹಯೋಗದಲ್ಲಿ ದಿನಾಂಕ 10/03/2017 ರಂದು HMC ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುತ್ತ ಮಾತನಾಡಿದ ಇಂಡಿಯನ್ ಕಲ್ಚರಲ್ ಸೆಂಟರ್ (ICC) ನ ಅಧ್ಯಕ್ಷೆಯಾದ ಶ್ರೀಮತಿ ಮಿಲನ್ ಅರುಣ್, ರಕ್ತದಾನದ  ಮಹತ್ವವನ್ನು ವಿವರಿಸುತ್ತಾ, ಉತ್ತಮವಾದ ದಾನವು  ಬಲ ಕೈಯಲ್ಲಿ  ಕೊಟ್ಟದ್ದು ಎಡ ಕೈಗೆ  ತಿಳಿಯದಂತದ್ದಾಗಿದೆ.  ಆದರೆ ರಕ್ತದಾನವು ಅದಕ್ಕಿಂತಲೂ ಮಿಗಿಲಾದದ್ದು. ಏಕೆಂದರೆ ನಾವು ಕೊಟ್ಟ ರಕ್ತವು ಯಾವ ಜೀವಕ್ಕೆ ಉಪಯೋಗವಾಗಿದೆ ಎಂದು ನಮಗೆ ತಿಳಿದಿರುವುದಿಲ್ಲ, ರಕ್ತದಾನವು ಮಹಾ ದಾನಗಳಲ್ಲಿ ಒಂದಾಗಿದೆ. ಆದುದರಿಂದ ಇಂತಹ ಶಿಬಿರಗಳನ್ನು ಏರ್ಪಡಿಸಿ ಜನರಲ್ಲಿ ಪ್ರಜ್ಞಾವಂತಿಕೆಯನ್ನು ಮೂಡಿಸಿ ರಕ್ತದಾನ ಮಾಡಲು ಪ್ರೋತ್ಸಾಹವನ್ನು ತುಂಬಬೇಕಾಗಿದೆ. ಹಾಗೂ  ಈ ನಿಟ್ಟಿನಲ್ಲಿ ಕತರ್ ಇಂಡಿಯಾ ಸೋಶಿಯಲ್ ಫೋರಮ್ (QISF)ನ  ಸಾಮಾಜಿಕ ಕಳಕಳಿಯನ್ನು ಮೆಚ್ಚಬೇಕಾಗಿದೆ ಎಂದರು.

ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕತರ್ ಇಂಡಿಯಾ ಸೋಶಿಯಲ್ ಫೋರಂನ ಕೇರಳ, ಕರ್ನಾಟಕ, ತಮಿಳುನಾಡು, ದೆಹಲಿ ಹಾಗೂ ಇತರ ರಾಜ್ಯಗಳ ಸದಸ್ಯರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. 

ಸಮಾರಂಭದ ವೇದಿಕೆಯಲ್ಲಿ ಕತರ್ ಇಂಡಿಯಾ ಸೋಶಿಯಲ್ ಫೋರಂನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಆಝೀಝ್ ಸುಭಾನ್, ಕಾರ್ಯದರ್ಶಿಯಾದ ಸಈದ್ ಕೋಮಾಚಿ, ಗಲ್ಫ್ ತೇಜಸ್ ಪತ್ರಿಕೆಯ ವ್ಯವಸ್ಥಾಪಕರಾದ ಅಬ್ದುಲ್ ರಝಕ್ ಟಿ. ವಿ. ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರವು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 3.00 ಗಂಟೆಯ ವರೆಗೆ ನಡೆದು 300 ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಲ್ಲಿ ಸಹಕರಿಸಿದರು.

Writer - ಖಲಂದರ್ ಶಾಫಿ ಜಾಲ್ಸೂರು

contributor

Editor - ಖಲಂದರ್ ಶಾಫಿ ಜಾಲ್ಸೂರು

contributor

Similar News