ಅಶ್ಲೀಲ ಸಿನೆಮಾ ತೋರಿಸಿದಾತನಿಗೆ 6 ತಿಂಗಳು ಜೈಲು, ಅರ್ಧಲಕ್ಷ ದಿರ್ಹಂ ದಂಡ

Update: 2017-03-20 11:21 GMT

 ಅಬುಧಾಬಿ,ಮಾ. 2:ಅಶ್ಲೀಲ ಸಿನೆಮಾಗಳನ್ನು ಸಂಗ್ರಹಿಸಿ ಮಕ್ಕಳ ಸಹಿತ ಹಲವರಿಗೆ ತೋರಿಸಿದ ಫಿಲಿಪ್ಪೀನ್ಸ್ ವ್ಯಕ್ತಿಯೊಬ್ಬನಿಗೆ ಕೆಳ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಅಬುಧಾಬಿ ಅಪೀಲು ನ್ಯಾಯಾಲಯ ಎತ್ತಿಹಿಡಿದಿದೆ. ಅಪಾದಿತ ವ್ಯಕ್ತಿ ಆರು ತಿಂಗಳು ಜೈಲುವಾಸ ಅನುಭವಿಸಬೇಕು, ಅಲ್ಲದೆ, ಐವತ್ತು ಸಾವಿರ ದಿರ್ಹಂ ದಂಡವನ್ನು ಭರಿಸಬೇಕಾಗಿದೆ. ಯುಎಇಯಲ್ಲಿ ನಿಷೇಧವಿರುವ ವೆಬ್‌ಸೈಟ್‌ಗಳಿಂದ ವಿಶೇಷ ಸಾಫ್ಟ್‌ವೇರ್ ಉಪಯೋಗಿಸಿ ಅಶ್ಲೀಲ ಸಿನೆಮಾಗಳನ್ನು ಸಂಗ್ರಹಿಸಿ ಈತ ಹಲವರಿಗೆ ಹಂಚಿಕೆ ಮಾಡಿದ್ದಾನೆ. ಮಕ್ಕಳ ಲೈಂಗಿಕತೆಯನ್ನು ಚಿತ್ರಿಸುವುದು ದೇಶದಲ್ಲಿ ಕಾನೂನು ವಿರೋಧಿ ಕ್ರಮವಾಗಿದ್ದು, ಈ ಫಿಲಿಪ್ಪೀನ್ಸ್ ವ್ಯಕ್ತಿ ಇಂತಹ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಫೋನ್‌ಮೂಲಕ ಹನ್ನೊಂದು ವರ್ಷಕ್ಕಿಂತ ಕೆಳ ವಯೋಮಾನದ ಮಕ್ಕಳಿಗೆ ಕಳುಹಿಸಿಕೊಟ್ಟಿದ್ದಾನೆ. ಈತನ ಮನೆಯನ್ನು ತಪಾಸಣೆ ಮಾಡಿದಾಗ ಕಂಪ್ಯೂಟರ್‌ನಲ್ಲಿ ಅಶ್ಲೀಲ ಸಿನೆಮಾಗಳ ಬಹುದೊಡ್ಡ ಭಂಡಾರವೇ ಪತ್ತೆಯಾಗಿತ್ತು. ಶಿಕ್ಷೆ ಅನುಭವಿಸಿದ ನಂತರ ಈತನನನ್ನು ಅಬುಧಾಬಿಯಿಂದ ಗಡಿಪಾರುಗೊಳಿಸಲಾಗುವುದು.

ಕಾನೂನು ಬಾಹಿರ ಸೈಟ್‌ಗಳನ್ನು ಸಂದರ್ಶಿಸುವವರ ಕುರಿತು ನಿಗಾ ಇರಿಸಲಾಗಿದೆ. ಅಶ್ಲೀಲ ಫೈಲುಗಳನ್ನು ಡೌನ್‌ಲೋಡ್ ಮಾಡುವುದು , ಪ್ರಚಾರ ಮಾಡುವುದು ಯುಎಇಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  ಅಪ್ರಾಪ್ತರನ್ನು ಬಳಸಿ ತಯಾರಿಸಿದ ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳನ್ನು ಸಂದರ್ಶನ ಮತ್ತು ಡೌನ್‌ಲೋಡ್ ಮಾಡುವುದಕ್ಕೆ ಒಂದೂವರೆ ಲಕ್ಷದಿಂದ ಹತ್ತುಲಕ್ಷ ದಿರ್ಹಂವರೆಗೂ ದಂಡ ಹಾಗೂ ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಯುಎಇಯಲ್ಲಿ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News