ಕೇರಳದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ : ಕೈಲಾಶ್ ಸತ್ಯಾರ್ಥಿ

Update: 2017-03-23 07:47 GMT

ಶಾರ್ಜ, ಮಾ. 23: ಕೇರಳದಲ್ಲಿ ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳಲ್ಲಿ ಹೆಚ್ಚಳ ಆಗಿರುವುದು ಆತಂಕಕಾರಿ ವಿಷಯವೆಂದು ನೋಬೆಲ್ ಪ್ರಶಸ್ತಿ ವಿಜೇತ ಮಕ್ಕಳ ಹಕ್ಕು ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ಮಕ್ಕಳ ವಿರುದ್ಧ ಅಕ್ರಮಗಳು ಎಲ್ಲಿನಡೆದರೂ ಅದು ವಿಷಾದಕರ. ಆದರೆ ಸಾಕ್ಷರತೆ ಮತ್ತು ಮಾನವಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿದ್ದ ಕೇರಳದಲ್ಲಿ ಇಂತಹ ಘಟನೆ ಹೆಚ್ಚುತ್ತಿರುವುದು ಅಪಾಯಕಾರಿ ಎಂದು ಇಂಟರ್‌ನೇಶನಲ್ ಕಮ್ಯುನಿಕೇಶನ್ ಫೋರಂನಲ್ಲಿ ಭಾಗವಹಿಸಲು ಶಾರ್ಜಕ್ಕೆ ಬಂದಿರುವ ಸತ್ಯಾರ್ಥಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಆದರೆ ಅತಿಕ್ರಮಗಳಾದರೆ ಅವುಗಳನ್ನು ಮುಚ್ಚಿಟ್ಟು ಜೀವನ ಪೂರ್ತಿ ನೋವನುಭವಿಸುವ ಬದಲಾಗಿ ಘಟನೆಯನ್ನು ಬಹಿರಂಗಗೊಳಿಸಿ ಆರೋಪಿಗಳನ್ನು ಕಾನೂನುಮುಂದೆ ತರಲು ಮಕ್ಕಳ ಹಕ್ಕು ಕಾರ್ಯಕರ್ತರು ಮತ್ತು ಹೆತ್ತವರು ಸಿದ್ಧರಾಗುತ್ತಿರುವುದು ಗಮನಾರ್ಹ ವಿಚಾರವಾಗಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲ ಹಕ್ಕುಗಳು ಲಭಿಸುವ ಪ್ರಜೆಗಳಾಗಿ ಬೆಳೆಯಲು ಸರಕಾರ ವಾತಾವರಣ ಕಲ್ಪಿಸಿಕೊಡಬೇಕಾಗಿದೆ ಎಂದು ಸತ್ಯಾರ್ಥಿ ಹೇಳಿದರು.

ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಸಾಗಾಟ ನಡೆಸುತ್ತಿರುವ ಅಪರಾಧ ಕೃತ್ಯ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ಎಂದರು. ಯುದ್ಧಗಳು ಮತ್ತು ವಾತಾವರಣ ಸೃಷ್ಟಿಸುವ ಬಡತನ, ಕಷ್ಟಗಳು ಅಪರಾಧಿಗಳಿಗೆ ಅನುಕೂಲವಾಗಿವೆ. ಹಕ್ಕು ನಿರಾಕರಿಸಲ್ಪಟ್ಟ ಹತ್ತು ಕೋಟಿ ಮಕ್ಕಳಿಗಾಗಿ, ಸೇವೆಗೆ ಸಿದ್ಧರಿರುವ ಹತ್ತು ಕೋಟಿ ಮಕ್ಕಳುಮತ್ತು ಯುವಕರು ಒಟ್ಟುಸೇರುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಸತ್ಯಾರ್ಥಿ ಈ ವೇಳೆ ತಿಳಿಸಿದರು. ಜಗತ್ತಿನ ವಿವಿಧಕಡೆಗಳಿಂದ ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಇದಕ್ಕೆ ಬೆಂಬಲ ಸೂಚಿಸಿದ್ದಾರೆಂದು ಸತ್ಯಾರ್ಥಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News