×
Ad

ಸೌದಿಯ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ನೋಂದಣಿ 25 ಶೇ. ಕುಸಿತ

Update: 2017-03-24 20:16 IST

ಜಿದ್ದಾ, ಮಾ. 24: ಸೌದಿ ಅರೇಬಿಯದಲ್ಲಿರುವ ಅಂತಾರಾಷ್ಟ್ರೀಯ ಶಾಲೆಗಳಿಗೆ ದಾಖಲಾಗಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 25 ಶೇಕಡ ಕುಸಿತವಾಗಿದೆ ಎಂದು ‘ಅಲ್ ವತನ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯೊಂದು ತಿಳಿಸಿದೆ.

ದೇಶದ ಆರ್ಥಿಕ ಏರಿಳಿತಗಳ ಹಿನ್ನೆಲೆಯಲ್ಲಿ ಈ ಕುಸಿತ ದಾಖಲಾಗಿದೆ ಎಂದು ಪತ್ರಿಕೆ ಹೇಳಿದೆ. ಆದಾಗ್ಯೂ, ಈ ವರ್ಷದ ಕೊನೆಯ ವೇಳೆಗೆ 50 ಶೇಕಡದಷ್ಟು ವಿದೇಶಿ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಶಾಲೆಗಳಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳ ಶೇಕಡಾವಾರು ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅದು ತಿಳಿಸಿದೆ.

ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳು ತೆಗೆದುಕೊಳ್ಳುತ್ತಿರುವ ಸುಧಾರಣಾ ಕ್ರಮಗಳಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದಾಗಿದೆ.
ಪರಿಣತರು ಮತ್ತು ಇಂಜಿನಿಯರ್‌ಗಳು ಮುಂತಾದ ಹೆಚ್ಚು ವೇತನದ ಉದ್ಯೋಗಗಳ ಮೇಲೆ ಆರ್ಥಿಕ ಸ್ಥಿತಿಗತಿಗಳು ಪರಿಣಾಮ ಬೀರಿವೆ ಎಂದು ಕೌನ್ಸಿಲ್ ಆಫ್ ಸೌದಿ ಚೇಂಬರ್ಸ್‌ನಲ್ಲಿ ಅಂತಾರಾಷ್ಟ್ರೀಯ ಶಿಕ್ಷಣದ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಝಿಯಾದ್ ಅಲ್-ರಹ್ಮದ ಹೇಳುತ್ತಾರೆ.

ಶಾಲೆಗಳ ನವೀಕರಣಕ್ಕಾಗಿ ಕಾರ್ಮಿಕ ಇಲಾಖೆಯು ಅಧಿಕ ಶುಲ್ಕವನ್ನು ವಸೂಲು ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳು ಮುಚ್ಚುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಉದ್ಯೋಗ ಮಾರುಕಟ್ಟೆಯಲ್ಲಿ ಸೌದೀಕರಣ ಆಗುತ್ತಿರುವುದೂ ಇದಕ್ಕೊಂದು ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News