ವಾಹನ ಅಪಘಾತದಲ್ಲಿ ಮಗು ಮೃತ: ಯುವತಿಯನ್ನು ಕ್ಷಮಿಸಿದ ಮಗುವಿನ ತಂದೆ

Update: 2017-03-26 11:25 GMT

ಮಸ್ಕತ್, ಮಾ. 26: ಇಬ್ರಿಯಲ್ಲಿ ವಾಹನ ಅಪಘಾತದಲ್ಲಿ ನಾಲ್ಕುವರ್ಷದ ಮಗು ಮೃತಪಟ್ಟ ಘಟನೆಯಲ್ಲಿ ಕಾರು ಚಲಾಯಿಸಿದ್ದ ಯುವತಿಗೆ ಮೃತಪಟ್ಟ ಮಗುವಿನ ತಂದೆ ಕ್ಷಮೆ ನೀಡಿದ್ದಾರೆ. ಇಬ್ರಿ ನಖಿಲ್ ಪ್ರಾಂತದಲ್ಲಿ ಕಳೆದವಾರ ರಸ್ತೆ ದಾಟುತ್ತಿದ್ದ ನಾಲ್ಕುವರ್ಷದ ಬಾಲಕ ಮುಆತ್ ಅಲ್ ಜಸಾಸಿಗೆ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾದರೂ ಬಾಲಕ ಬದುಕಿ ಉಳಿಯಲಿಲ್ಲ.

 ಮಾವನ ಮನೆಗೆ ರಸ್ತೆ ದಾಟಿ ಹೋಗುತ್ತಿದ್ದಾಗ ಯುವತಿ ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿತ್ತು. ಯುವತಿಯ ಮನವಿಯ ಪ್ರಕಾರ ಇಬ್ರಿಯದ ಮನೆಗೆ ಹೋಗಿ ಮಗುವಿನ ತಂದೆ ಯುವತಿಗೆ ಕ್ಷಮೆ ನೀಡಿದ್ದಾರೆ. ಪ್ರಮಾಣಿಕವಾಗಿ ತಾನು ಕ್ಷಮಿಸಿದ್ದೇನೆ. ಘಟನೆ ಪ್ರಜ್ಞಾಪೂರ್ವಕ ನಡೆದಿಲ್ಲ ಎಂದು ನನಗೆ ಗೊತ್ತಿದೆ. ಎಂದು ಮಗುವಿನ ತಂದೆ ಅಬ್ದುಲ್ಲಾ ಹೇಳಿದ್ದಾರೆ.

ಯುವತಿ ಜೀವನವಿಡೀ ಅಪರಾಧ ಪ್ರಜ್ಞೆಯನ್ನು ಹೊತ್ತು ಬದುಕುವುದನ್ನು ತಾನು ಬಯಸುವುದಿಲ್ಲ ಎಂದು ಅಬ್ದುಲ್ಲಾ ಹೇಳಿದರು. ನನ್ನ ಅನುಭವ ಎಲ್ಲ ಹೆತ್ತವರಿಗೂ ಪಾಠವಾಗಲಿ. ರಸ್ತೆದಾಟಿ ಹೋಗಲು ಪುಟ್ಟಮಕ್ಕಳನ್ನು ಬಿಡಬಾರದು ಎಂದು ಅಬ್ದುಲ್ಲಾ ಹೇಳಿದರು. ಮಗನನ್ನು ಕಳಕೊಂಡ ತಂದೆ ತೋರಿಸಿದ ಔದಾರ್ಯವನ್ನು ಮೆಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಯಾಗಿದೆ. ದೇವನ ಭಕ್ತಿಯೇ ಅಬ್ದುಲ್ಲಾರನ್ನು ಹೀಗೆ ಮಾಡಲು ಪ್ರೇರೇಪಿಸಿದೆ ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಹಲವರು ಬರೆದಿದ್ದಾರೆ.

ಕ್ಷಮೆ ಲಭಿಸಿದರೂ ಒಮನ್ ಸಾರಿಗೆ ಕಾನೂನುಪ್ರಕಾರ ಯುವತಿಗೆ ಯಾವುದಾದರೂ ಶಿಕ್ಷೆ ಅನುಭವಿಸಬೇಕಾಗುತ್ತದೆಯೇ ಎಂದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News