ದುಬೈ: ಅಪಘಾತದಲ್ಲಿ ಗಾಯಗೊಂಡ ಭಾರತೀಯ ಗೃಹಿಣಿಗೆ ಮೂರುವರೆ ಲಕ್ಷ ದಿರ್ಹಂ ಪರಿಹಾರ
ದುಬೈ,ಮಾ. 26: ವಾಹನ ಅಪಘಾತದಲ್ಲಿ ಗಾಯಗೊಂಡ ಗೃಹಿಣಿಗೆ ಮೂರುವರೆ ಲಕ್ಷ ದಿರ್ಹಂ ನಷ್ಟಪರಿಹಾರ ನೀಡಲು ದುಬೈ ಅಪೀಲು ನ್ಯಾಯಾಲಯ ತೀರ್ಪುನೀಡಿದೆ. 2012 ಜುಲೈಯಲಿ ದುಬೈಗೆ ಸಂದರ್ಶನ ವೀಸಾದಲ್ಲಿ ಬಂದಿದ್ದ ತೃಶೂರಿನ ವಲ್ಸಾ ಪಾಲ್ಸನ್‌ರು ಕಾರಿನಲ್ಲಿಪ್ರಯಾಣಿಸುತಿದ್ದಾಗ ಕಾರಿನ ಟಯರ್ ಸ್ಫೋಟಗೊಂಡು ಅಪಘಾತ ನಡೆದಿತ್ತು. ಗೃಹಿಣಿಯ ಎರಡು ಕಾಲುಗಳಿಗೂ ಗಂಭೀರ ಗಾಯವಾಗಿತ್ತು. ನಂತರ ಆಸ್ಪತ್ರೆಯಲ್ಲಿ ಗೃಹಿಣಿಯ ಎಡಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು. ನಂತರ ದುಬೈ ಪ್ರಾಥಮಿಕ ಸಿವಿಲ್ ನ್ಯಾಯಾಲಯದಲ್ಲಿ ಮೂರುವರೆ ಲಕ್ಷ ದಿರ್ಹಂ ನಷ್ಟಪರಿಹಾರ ಕೇಳಿ ದಾವೆ ಹೂಡಲಾಗಿತ್ತು. ಸಿವಿಲ್ ನ್ಯಾಯಾಲಯ ಪರಿಹಾರದ ಮೊತ್ತವನ್ನು 1.4 ದಿರ್ಹಂಗೆ ಇಳಿಸಿ ನಷ್ಟಪರಿಹಾರ ನೀಡುವಂತೆ ತೀರ್ಪು ನೀಡಿತ್ತು.
ನಷ್ಟ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಗೃಹಿಣಿಯ ವಕೀಲರು ಅಪೀಲು ಕೋರ್ಟಿನಲ್ಲಿ ದಾವೆ ಹೂಡಿದ್ದರು. ಇದನ್ನು ಮೊದಲು ತಳ್ಳಿಹಾಕಿತ್ತು. ನಂತರ ದುಬೈ ಸುಪ್ರೀಂಕೋರ್ಟು ಅಪೀಲು ನ್ಯಾಯಾಲಯಕ್ಕೆ ದಾಖಲೆಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ನಂತರ ಅಫೀಲು ನ್ಯಾಯಾಲಯದಲ್ಲಿ ಸಲ್ಲಿಸಲಾದ ದಾಖಲೆಗಳನ್ನು ಪರಿಗಣಿಸಿ ಗೃಹಿಣಿ ಬೇಡಿಕೆಯಿಟ್ಟಿದ್ದ ಮೂರುವರೆಲಕ್ಷ ದಿರ್ಹಂನ್ನು ಪರಿಹಾರ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಿದೆ.