ದೋಹಾ: ಕೆಎಂಸಿಎ ವತಿಯಿಂದ ಮಾ.27ರಂದು ಕ್ರಿಕೆಟ್ ಪಂದ್ಯಾಟ
ಕತರ್, ಮಾ.26: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್(ಕೆಎಂಸಿಎ) ವತಿಯಿಂದ 4ನೆ ವರ್ಷದ ಟಿಪ್ಪು ಸುಲ್ತಾನ್ ಕಪ್ ಕ್ರಿಕೆಟ್ ಪಂದ್ಯಾವಳಿಯು ಮಾ.27ರಿಂದ 30ವರೆಗೆ ದೋಹಾದ ಓಲ್ಡ್ ಐಡಿಯಲ್ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ.
27ರಂದು ಸಂಜೆ 6:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಇಂಡಿಯನ್ ಸ್ಪೋರ್ಟ್ ಸೆಂಟರ್ ಅಧ್ಯಕ್ಷ ನೀಲಾಂಗ್‌ಶು ಡೇ ಭಾಗವಹಿಸುವರು. ಪದ್ಮಶ್ರೀ ಮರಿಯಪ್ಪ ತಂಗವೇಲು ಮತ್ತು ಸತ್ಯನಾರಾಯಣ ಶಿವಮೊಗ್ಗ ಅತಿಥಿಗಳಾಗಿ ಭಾಗವಹಿಸುವರು.
ಮಾ.30ರಂದು ಸಂಜೆ 6:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಐಸಿಸಿ ಅಧ್ಯಕ್ಷ ಮಿಲನ್ ಅರುಣ್ ಭಾಗವಹಿಸುವರು. ಅತಿಥಿಗಳಾಗಿ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಕತರ್ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಅಲಿ ಘನೆಮ್ ಅಲ್ ಕುವಾರಿ, ಅಲ್ ಮುಝೈನ್ ಗ್ರೂಪ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ ಭಾಗವಹಿಸುವರು.
ಈ ಬಾರಿಯ ಪಂದ್ಯಾವಳಿಯಲ್ಲಿ ಕತರ್‌ನ ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್ ಕತರ್, ಕತರ್ ಫ್ರೆಂಡ್ಸ್ ಕ್ಲಬ್, ಎಸ್‌ಕೆಎಂಡಬ್ಲುಎ, ಸೋಶಿಯಲ್ ಫೋರಂ ಮತ್ತು ಹಿದಾಯ ಫೌಂಡೇಶನ್ ತಂಡಗಳು ಮತ್ತು ಆತಿಥೇಯ ಕೆಎಂಸಿಎ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ ಎಂದು ಪ್ರಕಟನೆ ತಿಳಿಸಿದೆ.