ಬಹ್ರೈನ್‌ನಲ್ಲಿ 14 ಮಂದಿ ಭಯೋತ್ಪಾದಕರ ಬಂಧನ

Update: 2017-03-28 10:14 GMT

ಮನಾಮ, ಮಾ. 28: ಬಹ್ರೈನ್‌ನ ಪ್ರಮುಖ ವ್ಯಕ್ತಿಗಳ ಹತ್ಯೆ ನಡೆಸಲು ಸಂಚು ನಡೆಸುತ್ತಿದ್ದ 14 ಮಂದಿಯ ಭಯೋತ್ಪಾದಕರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ವಿದೇಶಿ ನೆರವು ಇದೆ ಎಂದು ವಿವರಗಳು ಪೊಲೀಸರಿಗೆ ಲಭಿಸಿದ್ದು, ಈ ತಂಡ ಹಲವಾರು ದಾಳಿ ನಡೆಸುವುದಕ್ಕೆ ಯೋಜನೆ ಹಾಕಿತ್ತು ಎಂದು ಬಹ್ರೈನ್ ಪೊಲೀಸರು ತಿಳಿಸಿದ್ದಾರೆ.

ಇವರು ಜುಫೈರ್ ಯು.ಎಸ್, ನೌಕಾದಳ ಕೇಂದ್ರ ಮುಂತಾದೆಡೆ ಸ್ಫೋಟ ನಡೆಸುವ ಗುರಿಯನ್ನು ಹೊಂದಿದ್ದರು. ಆರೋಪಿಗಳು ಇರಾನ್ ಮತ್ತು ಇರಾಕ್‌ಗೆ ತೆರಳಿ ಸೈನಿಕ ತರಬೇತಿ ಪಡೆದು ಬಂದಿದ್ದಾರೆ. ಬಂಧಿತರಲ್ಲಿ ಕೆಲವರ ಮನೆಯೊಳಗಿನಿಂದ ಆಯುಧಗಳು ಮತ್ತುಸ್ಫೋಟಕ ವಸ್ತುಗಳು ಹಾಗೂ ನಾಡ ಬಾಂಬುಗಳು ವಶಪಡಿಸಲಾಗಿದೆ ಎಂದು ಬಹ್ರೈನ್ ಗೃಹಸಚಿವಾಲಯ ಹೇಳಿಕೆ ನೀಡಿದೆ. ಇವರಲ್ಲಿ ಕೆಲವರು ಇರಾನ್‌ಗೆ 66 ಬಾರಿ ಹೋಗಿ ಬಂದಿದ್ದಾರೆ. ಬಹ್ರೈನ್‌ನಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಕ್ಕೆ ತರಬೇತಿ ಪಡೆಯುವುದು ಇವರ ಉದ್ದೇಶವಾಗಿತ್ತು. ಬಹ್ರೈನ್ ಹುಡುಕುತ್ತಿರುವ ಅಪರಾಧಿಗಳು ಇವರಿಗೆ ಸಹಾಯಮಾಡಿದ್ದಾರೆ. ಈಗಿನ ಸರಕಾರವನ್ನು ಬುಡಮೇಲುಗೊಳಿಸುವುದು ತಮ್ಮ ಗುರಿಯಾಗಿತ್ತೆಂದು ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ. ಇದನ್ನು ಬಹ್ರೈನ್ ಟೆಲಿವಿಷನ್ ಕಳೆದ ದಿವಸ ಪ್ರಸಾರ ಮಾಡಿದೆ.

 ಇರಾನ್‌ನ ಕ್ರಾಂತಿಕಾರಿ ಸಂಸ್ಥೆಯೊಂದರಲ್ಲಿ ಇವರಲ್ಲಿ ಆರು ಮಂದಿ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ಇರಾಕ್‌ನಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಫೆ. 26ರಂದು ಜೈಲಿನತ್ತ ತೆರಳುತ್ತಿದ್ದ ಪೊಲೀಸ್ ಬಸ್ ವಿರುದ್ಧ ನಡೆದಸ್ಫೋಟದ ಆರೋಪಿಗಳಿಗೂ ಈಗ ಬಂಧಿಸಲಾದವರಿಗೂ ಸಂಬಂಧವಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನ ಸರಕಾರಿ ಕಟ್ಟಡಗಳ ಮೇಲೆ ನಿಗಾವಿರಿಸಲು ಮತ್ತು ಕೆಲವು ವ್ಯಕ್ತಿಗಳ ಚಲನವನ್ನು ಸೂಕ್ಷ್ಮವಾಗಿ ನಿರೀಕ್ಷಿಸಲು ಬಂಧಿಸಲಾದವರಿಗೆ ಸೂಚನೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News