ಮಹಿಳೆ ಜೀವ ಉಳಿಸಲು ಯಾಚಿಸುತ್ತಿದ್ದರೂ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಮಾಲಕ
Update: 2017-03-30 23:45 IST
ಕುವೈಟ್, ಮಾ.30: ಕುವೈಟ್‌ನ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಕಟ್ಟಡದಿಂದ ಕೆಳಕ್ಕೆ ಬೀಳುವ ಸಂದರ್ಭ ಸಹಾಯಕ್ಕಾಗಿ ಯಾಚಿಸುತ್ತಿದ್ದರೂ ಮನೆ ಮಾಲಕ ಆ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಅಮಾನವೀಯ ಘಟನೆ ನಡೆದಿದೆ.
ಇಥಿಯೋಪಿಯಾದ ಮಹಿಳೆ ಕುವೈಟ್‌ನ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಯಲ್ಲಿ ಈಕೆ ಮನೆಯ ಕಿಟಕಿಯನ್ನು ಏರಿ ಒಂದು ಕೈಯಲ್ಲಿ ಅದನ್ನು ಭದ್ರವಾಗಿ ಹಿಡಿದುಕೊಂಡು ತನ್ನ ಜೀವ ಉಳಿಸುವಂತೆ ಮನೆ ಮಾಲಕರಲ್ಲಿ ಗೋಗರೆಯುವ ದೃಶ್ಯವಿದೆ.
ಆದರೆ ಆತ ‘ಅದ್ಭುತ.. ಮುಂದುವರಿಸು’ ಎನ್ನುತ್ತಾ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವುದರಲ್ಲಿ ನಿರತನಾಗಿದ್ದ. ಅಷ್ಟರಲ್ಲಿ ಆ ಮಹಿಳೆ ಕೈತಪ್ಪಿ ಕಟ್ಟಡದಿಂದ ಕೆಳಜಾರಿ ಬಿದ್ದಿದ್ದಾಳೆ. ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು. ಕೆಳಗಿನ ಕಟ್ಟಡದ ಮೇಲಿದ್ದ ಹಾಸಿಗೆಯಂತ ವಸ್ತುವಿನ ಮೇಲೆ ಬಿದ್ದ ಕಾರಣ ಆಕೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ.