×
Ad

ಸೌದಿ: ಅಕ್ರಮ ವಾಸಿಗಳಿಗೆ 90 ದಿನಗಳ ಕ್ಷಮಾದಾನ ಅವಧಿ ಆರಂಭ

Update: 2017-03-31 20:48 IST

ರಿಯಾದ್, ಮಾ. 31: ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶೀಯರು ಯಾವುದೇ ದಂಡ ಪಾವತಿಸದೆ ದೇಶದಿಂದ ಹೊರ ಹೋಗಲು ಅವಕಾಶ ನೀಡುವ 90 ದಿನಗಳ ಕ್ಷಮಾದಾನ ಆರಂಭಗೊಂಡಿದ್ದು, ನೂರಾರು ಭಾರತೀಯ ವಲಸಿಗರು ಬುಧವಾರ ಮತ್ತು ಗುರುವಾರ ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಸಾಲುಗಟ್ಟಿದರು.

ಮೂರು ತಿಂಗಳ ಕ್ಷಮಾದಾನ ಅವಧಿಯಲ್ಲಿ ಭಾರತೀಯ ರಾಯಭಾರ ಕಚೇರಿಯು ಭಾರತೀಯ ರಾಷ್ಟ್ರೀಯರಿಗೆ ಸಹಾಯ ಮಾಡುವುದು ಎಂದು ರಾಯಭಾರ ಕಚೇರಿಯಲ್ಲಿರುವ ಸಮುದಾಯ ಕಲ್ಯಾಣ ಇಲಾಖೆಯ ಪ್ರಥಮ ಕಾರ್ಯದರ್ಶಿ ಅನಿಲ್ ನೌತಿಯಾಲ್ ಗುರುವಾರ ‘ಅರಬ್ ನ್ಯೂಸ್’ ಪತ್ರಿಕೆಗೆ ತಿಳಿಸಿದರು.

‘‘ಬುಧವಾರ 820 ಮಂದಿ ರಾಯಭಾರ ಕಚೇರಿಯಲ್ಲಿ ಸಾಲು ನಿಂತಿದ್ದರು. ಆ ಪೈಕಿ 615 ಮಂದಿ ತುರ್ತು ಪ್ರಮಾಣಪತ್ರ ಅಥವಾ ಔಟ್‌ಪಾಸ್‌ಗೆ ಅರ್ಜಿ ಸಲ್ಲಿಸಿದರು’’ ಎಂದರು. ‘‘ಗುರುವಾರವೂ ಸಾಲು ಉದ್ದವಾಗಿತ್ತು’’ ಎಂದರು.

ಆತಂಕ ರಹಿತ ಸೇವೆ ನೀಡುವುದಕ್ಕಾಗಿ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದರು ಹಾಗೂ ಅರ್ಜಿದಾರರು, ಅಧಿಕಾರಿಗಳು ಮತ್ತು ಅವರ ನಡುವೆ ಸಮನ್ವಯ ಸಾಧಿಸುತ್ತಿರುವ ಸ್ವಯಂಸೇವಕರೊಂದಿಗೆ ಮಾತನಾಡಿದರು ಎಂದು ನೌತಿಯಾಲ್ ತಿಳಿಸಿದರು.

ಸೌದಿ ಅರೇಬಿಯದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ಎಲ್ಲ ಭಾರತೀಯರು 2017ರ ಈ ಕ್ಷಮಾದಾನದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ರಾಯಭಾರಿ ಮನವಿ ಮಾಡಿದರು. ಈ ಸೌಲಭ್ಯವು ರಿಯಾದ್ ಮತ್ತು ಜಿದ್ದಾಗಳ ಜೊತೆಗೆ ದೇಶಾದ್ಯಂತದ ಇತರ 21 ಸ್ಥಳಗಳಲ್ಲೂ ಲಭ್ಯವಿದೆ ಎಂದರು.

ದಮ್ಮಾಮ್, ಜುಬೈಲ್, ಹೈಲ್, ಬುರೈದ, ವಾಡಿ ಅಲ್ ಡ್ವಾಸರ್, ಅಲ್-ಖಫ್ಜಿ, ಅಲ್ ಜೌಫ್, ಹಫಿರ್ ಅಲ್ ಬತಿನ್, ಅರರ್ ಮತ್ತು ಹೊಫುಫ್‌ಗಳಲ್ಲಿಯೂ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

24/7 ನಿಯಂತ್ರಣ ಕೊಠಡಿ

ರಾಯಭಾರ ಕಚೇರಿಯು 24/7 ನಿಯಂತ್ರಣ ಕೊಠಡಿಯೊಂದನ್ನು ಸ್ಥಾಪಿಸಿದೆ. 8002471234 (ಉಚಿತ) ಮತ್ತು +966114884697 ಈ ಫೋನ್ ಸಂಖ್ಯೆಗಳ ಮೂಲಕ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ.

ಔಟ್‌ಪಾಸ್ ಮತ್ತು ಎಕ್ಸಿಟ್ ವೀಸಾಗಳನ್ನು ಉಚಿತವಾಗಿ ನೀಡಲಾಗುವುದು. ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಪ್ರಯಾಣ ದಾಖಲೆಗಳನ್ನು ಒದಗಿಸುತ್ತವೆ.

ಸೌದಿ ಅಧಿಕಾರಿಗಳು ಎಕ್ಸಿಟ್ ವೀಸಾದ ಏರ್ಪಾಡು ಮಾಡುತ್ತಾರೆ. ವಿಮಾನ ಟಿಕೆಟನ್ನು ಅರ್ಜಿದಾರನೇ ಖರೀದಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News