ದುಬೈ: ಯುಎಇ ಅಹಾರ ಬ್ಯಾಂಕ್‌ಗೆ ಸಿದ್ಧತೆಗಳು ಪೂರ್ಣ

Update: 2017-04-02 16:31 GMT

ದುಬೈ, ಎ. 2: ಅಲ್ ಖೋಝ್‌ನಲ್ಲಿ ಸ್ಥಾಪನೆಯಾಗಿರುವ ಯುಎಇ ಫೂಡ್ ಬ್ಯಾಂಕ್ (ಆಹಾರ ಬ್ಯಾಂಕ್) ಪ್ರಸಕ್ತ ಪ್ರಾಯೋಗಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿದೆ ಹಾಗೂ ಎಲ್ಲ ವ್ಯವಸ್ಥೆಗಳು ಪೂರ್ಣಗೊಂಡ ಬಳಿಕ ಅದಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ದುಬೈ ಮುನಿಸಿಪಾಲಿಟಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಾಯೋಗಿಕ ಹಂತದಲ್ಲಿ ಐದು ದತ್ತಿ ಸಂಸ್ಥೆಗಳು ಪಾಲ್ಗೊಂಡಿವೆ ಎಂದು ಮುನಿಸಿಪಾಲಿಟಿಯ ಆಹಾರ ವಿಭಾಗದ ಅಧಿಕಾರಿ ನೂರ ಅಲ್ ಶಮ್ಸಿ ತಿಳಿಸಿದರು.

‘‘ಸ್ಥಳ ಮತ್ತು ದೇಣಿಗೆ ಪ್ರಕ್ರಿಯೆಯನ್ನು ಏರ್ಪಡಿಸುವ ಆ್ಯಪ್ ಸಿದ್ಧವಾಗಿವೆ. ಮುಚ್ಚಬೇಕಾದ ಅಂತರಗಳು ಹಾಗೂ ಈ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ನಾವು ಏನು ಮಾಡಬಹುದು ಎಂಬ ಬಗ್ಗೆ ನಾವೀಗ ಗಮನಹರಿಸುತ್ತಿದ್ದೇವೆ’’ ಎಂದು ಅವರು ನುಡಿದರು.

ಆಹಾರ ಸಂಗ್ರಹಿಸುವ ಕಂಟೇನರನ್ನು ಈ ವರ್ಷದ ಅಂತ್ಯದ ವೇಳೆಗೆ ನಿಯೋಜಿಸಲಾಗುವುದು.ಹೈಪರ್‌ಮಾರ್ಕೆಟ್‌ಗಳು, ಹೊಟೇಲ್‌ಗಳು ಮತ್ತು ಆಹಾರ ಮಳಿಗೆಗಳಿಂದ ಉಳಿಕೆ ಆಹಾರವನ್ನು ಸಂಗ್ರಹಿಸಲು ಮುನಿಸಿಪಾಲಿಟಿಯು ಟ್ರಕ್‌ಗಳ ವ್ಯವಸ್ಥೆ ಮಾಡುವುದು ಹಾಗೂ ಅವುಗಳನ್ನು ಕಂಟೇನರ್‌ನ ಪಕ್ಕದಲ್ಲಿ ನಿಲ್ಲಿಸಲಾಗುವುದು.

ಕಂಟೇನರ್‌ಗಳಲ್ಲಿ ಸಂಗ್ರಹವಾದ ಆಹಾರವನ್ನು ಸ್ವಯಂಸೇವಾ ಸಂಘಟನೆಗಳು ಸಂಗ್ರಹಿಸಿ ಅಗತ್ಯವಿರುವವರಿಗೆ ಹಂಚುತ್ತವೆ.ಮೂರು ವರ್ಷಗಳಲ್ಲಿ ಆಹಾರ ಬ್ಯಾಂಕ್ ದೇಶಾದ್ಯಂತ 15 ಕಂಟೇನರ್‌ಗಳನ್ನು ಹೊಂದಲಿದೆ.

ಆಹಾರದ ಅಪವ್ಯಯವನ್ನು ತಪ್ಪಿಸುವ ದೃಷ್ಟಿಯಿಂದ ಆಹಾರ ಬ್ಯಾಂಕ್ ಯೋಜನೆಯನ್ನು ಜನವರಿಯಲ್ಲಿ ಘೋಷಿಸಲಾಗಿತ್ತು. ಶೂನ್ಯ ಅಪವ್ಯಯವನ್ನು ಸಾಧಿಸಿದ ಮಧ್ಯಪ್ರಾಚ್ಯದ ಮೊದಲ ನಗರವಾಗಿ ದುಬೈಯನ್ನು ಮಾಡುವ ಗುರಿಯನ್ನು ಯೋಜನೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News