×
Ad

ಗಲ್ಫ್ ಉದ್ಯೋಗ ನಂಬಿ ಮೋಸ ಹೋದ ಜೆಸಿಂತಾ

Update: 2017-04-05 21:09 IST

ಉಡುಪಿ, ಎ.5: ಗಲ್ಫ್ ಉದ್ಯೋಗವನ್ನು ನಂಬಿ ಏಜೆಂಟ್‌ಗಳಿಂದ ಮೋಸ ಹೋಗಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುದರಂಗಡಿಯ ಜೆಸಿಂತಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಬಗ್ಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸರ್ವ ಪ್ರಯತ್ನದಲ್ಲಿದ್ದು, ಈ ಕುರಿತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ಜೆಸಿಂತಾರ ಉದ್ಯೋಗ ದಾತರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಜೆಸಿಂತಾ ಅವರ ಮೂವರು ಮಕ್ಕಳೊಂದಿಗೆ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜೆಸಿಂತಾ ಕುರಿತ ಭಯಾನಕ ಕಥನವನ್ನು ಬಿಚ್ಚಿಟ್ಟರು.

ಜೆಸಿಂತಾರ ಗಂಡ ಕಳೆದ ವರ್ಷ ತೀರಿಹೋಗಿದ್ದು, ತನ್ನ ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಆಕೆ ಉದ್ಯೋಗದ ಹುಡುಕಾಟ ನಡೆಸುತ್ತಿ ದ್ದರು. ಕತಾರ್‌ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆ ಮಾಡುವ ಉದ್ಯೋಗವಿರುವುದಾಗಿ ಮಂಗಳೂರಿನ ಸಬ್‌ಏಜೆಂಟ್ ಜೇಮ್ಸ್ ಎಂಬಾತ ತಿಳಿಸಿದ್ದು, ತಿಂಗಳಿಗೆ 25,000 ರೂ. ಸಂಬಳ ಕೊಡಿಸುವುದಾಗಿ ನಂಬಿಸಿದ್ದನು. ಯಾವುದೇ ಹಣ ಪಡೆದುಕೊಳ್ಳದೆ ಪ್ರಯಾಣಕ್ಕೆ ಬೇಕಾಗಿರುವ ಪಾಸ್‌ಪೋರ್ಟ್ ಹಾಗೂ ವೀಸಾಗಳನ್ನು ಆತನೇ ವ್ಯವಸ್ಥೆ ಮಾಡಿದುದರಿಂದ ಜೆಸಿಂತಾರಿಗೆ ಆತನ ಮೇಲೆ ನಂಬಿಕೆ ಬಂತು. ಮುಂಬಯಿಗೆ ತೆರಳಿದ ಜೆಸಿಂತಾ ಕಳೆದ ಜೂ.19ರಂದು ಗಲ್ಫ್ ವಿಮಾನವನ್ನೇರಿದರು. ಮರುದಿನ ನಿಲ್ದಾಣದಲ್ಲಿ ವಿಮಾನ ಇಳಿದ ಜೆಸಿಂತಾರಿಗೆ ತಾನು ಬಂದಿರುವು ಕತಾರ್‌ಗೆ ಅಲ್ಲ, ಸೌದಿ ಅರೇಬಿಯಾಕ್ಕೆ ಎಂಬುದು ತಿಳಿದು ಆಘಾತವಾಯಿತು.

ಅಲ್ಲಿ ಮೂವರು ಪತ್ನಿಯರಿಂದ ಹತ್ತಾರು ಮಕ್ಕಳಿದ್ದ ಅಬ್ದುಲ್ಲ ಅಲ್ಮುತಾರಿ ಎಂಬವರ ಮನೆಯಲ್ಲಿ ಕೆಲಸಕ್ಕೆ ಜೆಸಿಂತಾರನ್ನು ಇಡಲಾಯಿತು. ದಿನಕ್ಕೆ 16 ಗಂಟೆಗೂ ಅಧಿಕ ಕಾಲ ಕೆಲಸ, ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಜೆಸಿಂತಾ ಬಸವಳಿದು ಹೋಗಿದ್ದರು.

ಆಕೆ ಕೇಳಿಕೊಂಡರೂ ಊರಿಗೆ ಕಳುಹಿಸಲು ಮನೆಯವರು ಒಪ್ಪುತ್ತಿರಲಿಲ್ಲ. ಅದೇ ಊರಿನಲ್ಲಿ ಕೆಲಸ ಮಾಡುತ್ತಿ ರುವ ಭಾರತೀಯ ಕಾರು ಚಾಲಕನೋರ್ವನ ನೆರವಿನಿಂದ ಜೆಸಿಂತಾ ಡಿಸೆಂಬರ್ ಮೊದಲ ವಾರದಲ್ಲಿ ತನ್ನ ಮಕ್ಕಳನ್ನು ಸಂಪರ್ಕಿಸಿ ತಾನು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿದರು. ಮಕ್ಕಳು ಶಾಸಕರೊಬ್ಬರ ನೆರವಿನಿಂದ ರಿಯಾದ್‌ನಲ್ಲಿರುವ ಭಾರತ ದೂತಾವಾಸದ ಮೂಲಕ ತಾಯಿಯನ್ನು ಪತ್ತೆ ಹಚ್ಚಲು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.

2016ರ ಡಿ.30ರಂದು ಜೆಸಿಂತಾರ ಮೂವರು ಮಕ್ಕಳೂ ಪ್ರತಿಷ್ಠಾನವನ್ನು ಸಂಪರ್ಕಿಸಿದರು. ಪ್ರತಿಷ್ಠಾನ ಈ ಕುರಿತು ಮಂಗಳೂರಿನ ಜಿಲ್ಲಾಧಿಕಾರಿಗಳ ಮೂಲಕ ಸಹಾಯಕ ಪೋಲೀಸ ಕಮೀಷನರಿಗೆ ದೂರು ನೀಡಿತು. ಪೋಲೀಸರು ಜೇಮ್ಸ್‌ನನ್ನು ಹಿಡಿದು ವಿಚಾರಿಸಿದರಾದರೂ ಅವನಿಂದ ಯಾವುದೇ ಮಾಹಿತಿ ದೊರೆಯಲಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಪ್ರತಿಷ್ಠಾನವು ರಿಯಾದ್‌ನ ಭಾರತೀಯ ದೂತಾವಾಸವನ್ನು ಸಂಪರ್ಕಿಸಿದಾಗ ಅಬ್ದುಲ್ಲ ಅಲ್ಮುತಾರಿ ವಿಳಾಸ ಹಾಗೂ ವಿವರಗಳು ದೊರೆತವು.

ಅಬ್ದುಲ್ಲ ಅಲ್ಮುತಾರಿಯನ್ನು ವಿಚಾರಿಸಿದಾಗ ಎರಡು ವರ್ಷಗಳ ಕಾಲ ತನ್ನ ಮನೆಯಲ್ಲಿ ಕೆಲಸ ಮಾಡಲು ಜೆಸಿಂತಾ ಒಪ್ಪಂದ ಮಾಡಿಕೊಂಡಿದ್ದು, ಇದಕ್ಕಾಗಿ ಭಾರತೀಯ ಎಜೆಂಟ್ ನನ್ನಿಂದ 24000 ಸೌದಿ ರಿಯಾಲ್(ಸುಮಾರು 5ಲಕ್ಷ ರೂ.)ಗಳನ್ನು ಪಡೆದುಕೊಂಡಿದ್ದಾನೆ. ಅದನ್ನು ಹಿಂದಿರುಗಿಸಿದಲ್ಲಿ ಜೆಸಿಂತಾಳನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದನು. ಈ 5ಲಕ್ಷ ರೂ.ವನ್ನು ಮುಂಬಯಿಯ ಏಜೆಂಟ್ ಶಾಬಾಖಾನ್ ಅಥವಾ ಮಂಗಳೂರಿನ ಸಬ್ ಏಜೆಂಟ್ ಜೇಮ್ಸ್ ಲಪಟಾಯಿಸಿದ್ದಾರೆಯೇ ಎಂಬುದುಇನ್ನೂ ಖಚಿತವಾಗಿಲ್ಲ.

ಕಳೆದ ವಾರ ಜೆಸಿಂತಾ ಬಿಡುಗಡೆಯ ಕೊನೆಯ ಪ್ರಯತ್ನವಾಗಿ ಪ್ರತಿಷ್ಠಾನವು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸಂಪರ್ಕಿಸಿತು. 24 ಗಂಟೆಗಳ ಒಳಗೆ ಸಚಿವಾಲಯದ ಹಿರಿಯ ಅಧಿಕಾರಿ ಎಂ.ಸಿ.ಲೂಥರ್ ಪ್ರತಿಷ್ಠಾನವನ್ನು ಸಂಪ ರ್ಕಿಸಿ ಪ್ರಕರಣದ ಎಲ್ಲಾ ಮಾಹಿತಿಗಳನ್ನು ಪಡೆದು ಸೌದಿಯಲ್ಲಿರುವ ಅಬ್ದುಲ್ಲ ಅಲ್ಮುತಾರಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅಬ್ದುಲ್ಲ ಅಲ್ಮುತಾರಿ ಯಿಂದ ಐದು ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿರುವ ಮುಂಬಯಿಯ ಏಜೆಂಟ್ ಶಾಬಾ ಖಾನ್ ಎಂಬಾತನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಮಾನವ ಕಳ್ಳ ಸಾಗಾಟ ದಂಧೆ?

ಜೆಸಿಂತಾ ಸೌದಿ ಅರೇಬಿಯಾಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ಅವರೊಂದಿಗೆ ಇನ್ನಿಬ್ಬರು ಕರಾವಳಿ ಜಿಲ್ಲೆಯ ಯುವತಿಯರಿದ್ದು, ಅವರ ಹೆಸರು ದಿಯಾ ಮತ್ತು ಜೇನ್. ಆದರೆ ಅವರ ವಿಳಾಸ ಮತ್ತು ಯಾವ ಊರಿಗೆ ಹೋಗುತ್ತಿದ್ದರೆಂಬುದು ಜೆಸಿಂತಾರಿಗೆ ತಿಳಿದಿಲ್ಲ. ಆದರೆ ಇವರು ಕೂಡ ಇದೇ ಎಜೆಂಟ್ ಮೂಲಕ ಹೋಗಿದ್ದಾರೆ ಎಂಬುದು ಖಚಿತ ಮಾಹಿತಿ ಸಿಕ್ಕಿದೆ.

ಕಳೆದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನುಕ್ರಮವಾಗಿ ನಾಲ್ಕು ಮತ್ತು ಐದು ಯುವತಿಯರನ್ನು ಮಂಗಳೂರಿನಿಂದ ಗಲ್ಫ್ ರಾಷ್ಟಗಳಿಗೆ ಕಳುಹಿಸಲಾಗಿದೆ ಎಂಬ ಮಾಹಿತಿಯೂ ದೊರೆತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ಯಾನುಭಾಗ್ ತಿಳಿಸಿದರು.

ಜೆಸಿಂತಾರನ್ನು ದೆಹಲಿಯ ಟ್ರಿಯೋ ಟ್ರಾಕ್ಸ್ ಟ್ರಾವೆಲ್ಸ್ ಎಂಬ ಏಜೆನ್ಸಿ ಕಳುಹಿಸಿದ್ದು, ಈ ಎಜೆನ್ಸಿಯ ಪರವಾನಿಗೆ ಈ ಹಿಂದೆಯೇ ರದ್ದು ಪಡಿಸಲಾಗಿದ್ದು ವಿದೇಶಾಂಗ ಸಚಿವಾಲಯವು ಇದನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಆದರೆ ಮಂಗ ಳೂರಿನಲ್ಲಿ ಇದರ ಏಜೆಂಟರು ಇಂದಿಗೂ ಕಾನೂನು ಬಾಹಿರವಾಗಿ ಕಾರ್ಯಾ ಚರಿಸುತ್ತಿದ್ದಾರೆ.

ಇಂತಹ ಖೋಟಾ ಟ್ರಾವೆಲ್ ಕಂಪೆನಿಗಳು ಕರಾವಳಿ ಜಿಲ್ಲೆಯ ವರನ್ನು ಬಜ್ಪೆ ವಿಮಾನ ನಿಲ್ದಾಣದ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸದೆ ಮಂಗಳೂರಿನಿಂದ ಮುಂಬಯಿಗೆ ರೈಲಿನಲ್ಲಿ ಕರೆದುಕೊಂಡು ಹೋಗಿ, ಅಲ್ಲಿಂದ ವಿಮಾನದಲ್ಲಿ ಕಳುಹಿಸುತ್ತಿದ್ದಾರೆ. ಹೆಚ್ಚಿನವರಿಗೆ ತಾವು ಯಾವ ದೇಶಕ್ಕೆ ಹೋಗುತ್ತಾರೆ ಎಂಬುದು ತಿಳಿಯುವುದಿಲ್ಲ. ಹೆಚ್ಚಿನ ಸಂಬಂಧಿಕರಿಗೆ ಉದ್ಯೋಗ ದಾತರ ಹೆಸರೂ ತಿಳಿದಿಲ್ಲ. ಅವರಲ್ಲಿ ವೀಸಾ ವಿವರಗಳೂ ಇಲ್ಲ ಎಂದರು.

ಗಂಗೊಳ್ಳಿ ಯುವಕರ ಸಹಕಾರ:

ಜೆಸಿಂತಾ ಪ್ರಕರಣದ ಪ್ರತಿಯೊಂದು ಹಂತದಲ್ಲಿ ಗಂಗೊಳ್ಳಿಯ ಯುವಕ ಮಹಮ್ಮದ್ ಅಜಂ ಮತ್ತು ಆತನ ಸಂಗಡಿಗರು ಸೌದಿಯಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಿದ್ದಾರೆ. ಆಕೆ ಭಾರತಕ್ಕೆ ಹಿಂದಿರುಗುವ ತನಕ ಪ್ರತಿಯೊಂದು ಕಾರ್ಯದಲ್ಲೂ ಆಕೆಗೆ ಸರ್ವರೀತಿಯ ಸಹಕಾರ ನೀಡುವ ಆಶ್ವಾಸನೆ ನೀಡಿದ್ದಾರೆ. ಜೆಸಿಂತಾ ಯಂಬು ಪಟ್ಟಣದ ಯಾವ ವಿಳಾಸದಲ್ಲಿ ಕೆಲಸ ಮಾಡುತಿದ್ದಾರೆ ಎಂದು ಕಂಡು ಹಿಡಿಯುವಲ್ಲಿ ಈ ಯುವಕರೇ ಅಧಿಕಾರಿಗಳಿಗೆ ಸಹಕಾರ ನೀಡಿದ್ದರು ಎಂದು ಶ್ಯಾನುಭಾಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News