×
Ad

ಮಂಗಳೂರು ಪೋಲೀಸ್ ದೌರ್ಜನ್ಯ ಪ್ರಕರಣ: ಯುಎಇ-ಉಡುಪಿ ವೆಲ್ಫೇರ್ ಫೋರಂ ಕಳವಳ

Update: 2017-04-07 23:34 IST

 ಯುಎಇ, ಎ.7: ಹಳೆಯ ಪ್ರಕರಣವೊಂದರ ವಿಚಾರಣೆಗಾಗಿ ವಶಪಡಿಸಿ ಕೊಂಡಿದ್ದ ಯುವಕನ ಮೇಲೆ ಮಾರಣಾಂತಿಕ ದೌರ್ಜನ್ಯ ಮತ್ತು ಅದನ್ನು ಸಂವಿಧಾನಾತ್ಮಕ ವಾಗಿ ಪ್ರತಿಭಟಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದ ಲಾಟಿಚಾರ್ಜನ್ನು ಯುಎಇ ಅನಿವಾಸಿ ಭಾರತೀಯರ ಸಾಮಾಜಿಕ ಸಂಘಟ‌ನೆ ಯುಎಇ-ಉಡುಪಿ ವೆಲ್ಫೇರ್ ಫೋರಂ ತೀವ್ರವಾಗಿ ಖಂಡಿಸಿದೆ.

ಮಾ.21ರಂದು ರಾತ್ರೋ ರಾತ್ರಿ ವಿಚಾರಣೆ ನೆಪದಲ್ಲಿ ಅಹ್ಮದ್ ಖುರೇಷ್ ಎನ್ನುವ ಯುವಕನನ್ನು ವಶಕ್ಕೆ ಪಡೆದ ಪೋಲೀಸರು ಅನ್ನ ನೀರು ಕೊಡದೆ ತೀವ್ರ ರೀತಿಯ ಹಿಂಸೆಯನ್ನು ನೀಡಿರುವುದು, ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಕಿಡ್ನಿಗಳೆರಡು ಕಾರ್ಯ  ನಿರ್ವಹಿಸದಂತೆ ಮಾಡಿರುವುದು ಭೀಕರ ಗ್ವಾಂಟೆನೆಮೋ ಜೈಲುಗಳನ್ನು ನಾಚಿಸುವಂತಿದೆ. ಮಾತ್ರವಲ್ಲದೆ ಪೋಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಯ ಶಕ್ತಿಗಳನ್ನು ಲಾಟಿಯೇಟಿನ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದ ಪೋಲೀಸರ ಸರ್ವಾಧಿಕಾರಿ ಧೋರಣೆಯು ಅತ್ಯಂತ ಹೇಯ ಮತ್ತು ಪ್ರಜಾಪ್ರಭುತ್ವಕ್ಕೆ ನೀಡಿದ ಹೊಡೆತ ಎಂದು ಬಣ್ಣಿಸಿದ ಯುಎಇ-ಉಡುಪಿ ವೆಲ್ಫೇರ್ ಫೋರಂ, ಅಧ್ಯಕ್ಷರಾದ ಇಬಾದ್ ಶೇಟ್ ಹೊನ್ನಾಳ ಇವರು ಸತ್ಯ ಮತ್ತು ನ್ಯಾಯದ ಪರ ಹೋರಾಟಗಳು ಅದುಮಿದಷ್ಟು ಮತ್ತೆ ಪುಟಿದೇಳುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ. 

ಈ ಎರಡೂ ಘಟನೆಗಳಲ್ಲಿ ಮಂಗಳೂರು ಪೋಲೀಸರ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದ್ದು. ಸಂಪೂರ್ಣ ಪ್ರಕರಣದ ಬಗ್ಗೆ ಸರಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಯುಎಇ-ಉಡುಪಿ ವೆಲ್ಫೇರ್ ಫೋರಂ ಆಗ್ರಹಿಸಿದೆ. 

ಕರ್ನಾಟಕದಲ್ಲಿ  ಅಹಿಂದ ಪರ ಸರಕಾರವು ಆಡಳಿತದಲ್ಲಿದ್ದೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು ಪೋಲೀಸ್ ಯಂತ್ರ ಮತ್ತು ವಿಚ್ಛಿದ್ರಕಾರಿ ಶಕ್ತಿಗಳಿಂದ ನಿರಂತರವಾಗಿ ಧಮನಿಸಲ್ಪಡುತ್ತಿರುವುದು ಅನಿವಾಸಿ ಭಾರತೀಯರನ್ನು ಆತಂಕ್ಕೀಡುಮಾಡಿದೆ ಎಂದು ಯುಎಇ-ಉಡುಪಿ ವೆಲ್ಫೇರ್ ಫೋರಂ ಕಳವಳ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News