ಖುರೇಶಿಗೆ ನ್ಯಾಯ ಒದಗಿಸಲು ಆಗ್ರಹ: ಮದೀನಾ ಮುಸ್ಲಿಂ ಒಕ್ಕೂಟದಿಂದ ಸಚಿವ ಖಾದರ್ ಗೆ ಮನವಿ
ಮದೀನಾ, ಎ.12: ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಬರುವ ಸಿಸಿಬಿ ಪೋಲಿಸರಿಂದ ದೌರ್ಜನ್ಯಕ್ಕೊಳಗಾದ ಖುರೇಶಿಯವರಿಗೆ ನ್ಯಾಯ ಒದಗಿಸಲು, ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ ಮಾಡಿದ ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್ ಮಾಡಿದ ಪೋಲಿಸರ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಅನಿವಾಸಿ ಕನ್ನಡಿಗರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ಆಹಾರ ಸಚಿವ ಯು.ಟಿ. ಖಾದರ್ ಅವರಿಗೆ ಮದೀನಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಖಾದರ್ ಮಾತನಾಡಿ, ಖುರೇಶಿ ಮತ್ತು ಲಾಠಿಚಾರ್ಜ್ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜ್ಯದಿಂದ ಆಗಮಿಸುವ ಹಜ್ ಮತ್ತು ಉಮ್ರಾ ಯಾತ್ರಿಕರಿಗೆ ಆಗುವ ಸಮಸ್ಯೆ ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಆಗುವ ತೊಂದರೆಗಳನ್ನು ಪರಿಹರಿಸುವಂತೆ ಒಕ್ಕೂಟವು ಸಚಿವರನ್ನು ಆಗ್ರಹಿಸಿತು.
ಈ ಸಂದರ್ಭದಲ್ಲಿ ದ.ಕ. ಸುನ್ನೀ ಸೆಂಟರ್ ಮುಖಂಡರಾದ ಶರೀಫ್ ಮರವೂರು, ಮುಹಮ್ಮದಲಿ ಪಾಣೆಮಂಗಳೂರು, ಇಕ್ಬಾಲ್ ಕುಪ್ಪೆಪದವು, ಬದ್ರುದ್ದೀನ್ ಕಬಕ, ರಝಾಕ್ ಅಳಕೆಮಜಲು, ದಾರುಲ್ ಇರ್ಶಾದ್ ಸಮಿತಿಯ ಬಶೀರ್ ಉಪ್ಪಿನಂಗಡಿ, ಹಬೀಬ್ ಅಳಕೆ, ಇಂಡಿಯಾ ಫ್ರೆಟರ್ನಿಟಿ ಫೋರಂ ನ ಝಫರುಲ್ಲಾ, ಅಶ್ರಫ್ ಮರವೂರು, ಆಸಿಫ್ ಕುಂಜತ್ತಬೈಲ್, ಆರಿಫ್ ಮಡಂತ್ಯಾರ್, ನ್ಯೂ ವೆಲ್ಫೇರ್ ಎಸೋಸಿಯೇಷನ್ ನ ಅಝೀಝ್ ಗಡಿಯಾರ್, ಸಲೀಂ ಕಬಕ, ಖಾದಿಸ್ಸಿಯಾ ಕಾವಳ್ಕಟ್ಟೆ ಯ ಜಬ್ಬಾರ್ ಪೆರಿಯಡ್ಕ, ಅಲ್ ಇಹ್ಸಾನ್ ಕೊಡಗು ಇದರ ಸಮದ್ ಕೊಡಗು, ಟೀಂ ಮದೀನಾದ ಜುನೈದ್, ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.