ಮಂಗಳೂರು-ಜಿದ್ದಾ ನೇರ ವಿಮಾನ ಸಂಚಾರಕ್ಕೆ ಆಗ್ರಹ: ಕೆಸಿಎಫ್ ಜಿದ್ದಾ ಝೋನ್ ನಿಂದ ಸಚಿವ ಖಾದರ್‌ಗೆ ಮನವಿ
ಸೌದಿ ಅರಬಿಯ, ಎ.14: ಮಂಗಳೂರು-ಜಿದ್ದಾ ಮಾರ್ಗವಾಗಿ ನೇರ ವಿಮಾನ ಸಂಚಾರ ಹಾಗೂ ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಅವರಿಗೆ ಕೆಸಿಎಪ್ ಜಿದ್ದಾ ಝೋನ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಉಮ್ರಾ ಪ್ರವಾಸದಲ್ಲಿರುವ ಸಚಿವ ಖಾದರ್ ಅವರನ್ನು ಮಕ್ಕತುಲ್ ಮುಕರ್ರಮದಲ್ಲಿ ಭೇಟಿಯಾದ ಕೆಸಿಎಫ್ ಜಿದ್ದಾ ಝೋನ್ ಪದಾಧಿಕಾರಿಗಳು, ವಯಸ್ಕರು, ಮಕ್ಕಳು ಸೇರಿದಂತೆ ಹಲವಾರು ಯಾತ್ರಾರ್ಥಿಗಳು ಪವಿತ್ರ ಉಮ್ರಾ ನಿರ್ವಹಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿದ್ದಾಗೆ ಆಗಮಿಸುತ್ತಾರೆ. ಅಲ್ಲದೆ, ಮಂಗಳೂರು, ಕಾಸರಗೋಡು, ಉಡುಪಿ, ಕುಂದಾಪುರ, ಮಡಿಕೇರಿ, ಕೊಡಗು, ಚಿಕ್ಕಮಗಳೂರು ಮುಂತಾದ ಸ್ಥಳಗಳಿಂದ ಹಲವಾರು ಪ್ರವಾಸಿಗರು ಜಿದ್ದಾ, ಮಕ್ಕತುಲ್ ಮುಕರ್ರಮಃ, ತ್ವಾಯಿಫ್ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆಲ್ಲ ಮಂಗಳೂರಿನಿಂದ ಜಿದ್ದಾ ತಲುಪಲು ನೇರ ವಿಮಾನ ಸಂಪರ್ಕವಿಲ್ಲದೆ ಹಲವಾರು ತೊಂದರೆಗಳನ್ನು ಎದುರಿಸುವಂತಾಗಿದೆ. ಇದಕ್ಕೊಂದು ಪರಿಹಾರವಾಗಿ ಮಂಗಳೂರು-ಜಿದ್ದಾ ಮಾರ್ಗವಾಗಿ ವಾರದಲ್ಲಿ ಒಂದು ವಿಮಾನ ಸಂಚಾರವನ್ನಾದರೂ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದಕ್ಕೆ ಸ್ಪಂದಿಸಿದ ಸಚಿವ ಖಾದರ್, ಈ ಕುರಿತಂತೆ ಹಿಂದೊಮ್ಮೆ ಜಿದ್ದಾದಲ್ಲಿ ಸಂಬಂಧಪಟ್ಟ ಅಧಿಕಾರಿಯವರಲ್ಲಿ ಮಾತನಾಡಿದ್ದೇನೆ. ಈ ಬಗ್ಗೆ ಇನ್ನೊಮ್ಮೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಅಲ್ಲದೇ ಈ ವಿಚಾರವನ್ನು ಭಾರತ ನಾಗರಿಕ ವಿಮಾನಯಾನ ಸಚಿವಾಲಯದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು
ಈ ಸಂದರ್ಭ ಕೆಸಿಎಫ್ ಜಿದ್ದಾ ರೆನಲ್ ನೇತಾರ ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮ್ ಸೆಕ್ಟರ್ ಪ್ರ. ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಮಕ್ಕಾ ಸೆಕ್ಟರ್ ಕಚೇರಿ ವಿಭಾಗದ ಅಧ್ಯಕ್ಷ ಕಲಂದರ್ ಶಾಫಿ ಅಸೈಗೋಳಿ, ಕಚೇರಿ ವಿಭಾಗದ ಕಾರ್ಯದರ್ಶಿ ಮುಶ್ತಾಕ್ ಅಹ್ಮದ್ ಸಾಗರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಫೀಕ್‌ಕೊಳಕೇರಿ, ಮುಜೀಬ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.