ಶಾರ್ಜ: ಭಾರತದ ಶಾಲಾ ಬಸ್ ಚಾಲಕನಿಗೆ ಹಲ್ಲೆ ಮಾಡಿದ ಪಾಕಿಸ್ತಾನಿಯ ಬಂಧನ
ಶಾರ್ಜ, ಎ.15: ಕೇರಳದ ಶಾಲಾ ವಾಹನ ಚಾಲಕನನ್ನು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮುಂದೆಯೇ ಮಾರಕವಾಗಿ ಥಳಿಸಿದ್ದ ಪಾಕಿಸ್ತಾನಿ ವ್ಯಕ್ತಿಯನ್ನು(35) ಶಾರ್ಜ ಪೊಲೀಸರು ಬಂಧಿಸಿದ್ದಾರೆ.
ಕಳೆದ ಗುರುವಾಗ ಬೆಳಗ್ಗೆ ಅಲ್ ಇತ್ತಿಹಾದ್ ರಸ್ತೆಯಲ್ಲಿ ಶಾರ್ಜ, ದುಬೈ ಗಡಿಭಾಗದಲ್ಲಿ ಘಟನೆ ನಡೆದಿತ್ತು. ದುಬೈ ಎಲ್.ಎಚ್. ಮಾದರಿ ಶಾಲಾ ವಾಹನ ಚಾಲಕ ಕೊಲ್ಲಂನ ಸದಾಶಿವನ್(62)ಎಂಬವರನ್ನು ಪಾಕಿಸ್ತಾನಿ ಮಿನಿಬಸ್ ಚಾಲಕ ರಸ್ತೆಯಲ್ಲಿ ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ. ಓವರ್ ಟೇಕ್‌ಗೆ ಅವಕಾಶ ಕೊಡಲಿಲ್ಲ ಎನ್ನುವುದು ಪಾಕಿಸ್ತಾನಿಯ ಕೋಪಕ್ಕೆ ಕಾರಣವಾಗಿತ್ತು. ರಸ್ತೆಯಲ್ಲಿ ವಾಹನ ದಟ್ಟಣೆ ಇದ್ದ ಬೆಳಗ್ಗಿನ ಸಮಯದಲ್ಲಿ ಪಾಕಿಸ್ತಾನಿ ಚಲಾಯಿಸುತ್ತಿದ್ದ ಮಿನಿ ಬಸ್ ಮುಂದೆ ಹೋಗಲು ಸಾಧ್ಯವಾಗಿರಲಿಲ್ಲ ಆದ್ದರಿಂದ ಆತ ಸದಾಶಿವನ್‌ರ ವಿರುದ್ಧ ಕೋಪದಿಂದ
ಕೆಂಡಮಂಡಲನಾಗಿದ್ದ. ಸ್ವಲ್ಪ ಅವಕಾಶ ಸಿಕ್ಕಿದೊಡನೆ ತನ್ನ ವಾಹನವನ್ನು ಮುಂದಕ್ಕೆ ಚಲಾಯಿಸಿ ಸದಾಶಿವನ್‌ರ ಬಸ್‌ಗೆ ಅಡ್ಡವಾಗಿ ನಿಲ್ಲಿಸಿದ್ದಾನೆ. ಸದಾಶಿವನ್ ಹೊರಗೆ ಇಳಿದಾಗ ಅವಾಚ್ಯವಾಗಿ ಬೈದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಬಸ್‌ನಲ್ಲಿದ್ದ ಸ್ಥಳೀಯ ಪ್ರಜೆಯೊಬ್ಬರು ತಕ್ಷಣ ಪೊಲೀಸರಿಗೆ ದೂರುನೀಡಿದರು. ಇದನ್ನು ಗಮನಿಸಿ ಪಾಕಿಸ್ತಾನಿ ಮಿನಿ ಬಸ್‌ನೊಂದಿಗೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಅಧ್ಯಾಪಕರು ಆತನನ್ನು ತಡೆದು ನಿಲ್ಲಿಸಿದರು.
ಥಳಿತಕೊಳಗಾಗಿದ್ದ ಸದಾಶಿವನ್‌ರ ಆರೋಗ್ಯ ಕೆಡತೊಡಗಿದ್ದನ್ನು ಗಮನಿಸಿದ ಅಧ್ಯಾಪಕರು ಆ್ಯಂಬುಲೆನ್ಸ್‌ಗೆ ಫೋನ್ ಮಾಡಿದರು. ಪೊಲೀಸರು ಮತ್ತು ಪ್ಯಾರ ಮೆಡಿಕಲ್ ತಂಡ ಕೂಡಲೇ ಸ್ಥಳಕ್ಕಾಗಮಿಸಿ, ಸದಾಶಿವನ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನಿ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ.