ಅಹಿಂದ ಜನಾಂದೋಲನಕ್ಕೆ ಅಂಬೇಡ್ಕರ್ ಜಯಂತಿ ಮುನ್ನುಡಿಯಾಗಲಿ: ಇಂಡಿಯನ್ ಸೋಶಿಯಲ್ ಫೋರಮ್

Update: 2017-04-16 14:13 GMT

ದಮಾಮ್, ಎ.16: ದೇಶದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಸಮುದಾಯ ಮತ್ತು ಅತಿದೊಡ್ದ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮ್ ಸಮುದಾಯವು ಅತ್ಯಂತ ಗಂಭೀರ ಸನ್ನಿವೇಶವನ್ನು ಎದುರಿಸುತ್ತಿದೆ. ಇದು ಸಂವಿಧಾನದ ಮೂಲ ಆಶಯವಾಗಿರುವ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಬೆಳವಣಿಗೆಯಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ರಾಜ್ಯ ಸಮಿತಿ ಈಸ್ಟರ್ನ್ ಪ್ರೊವಿನ್ಸ್ ಸೌದಿ ಅರೇಬಿಯ ಹೇಳಿದೆ.

ಅಂಬೇಡ್ಕರ್ ಸಾರಿದಂತೆ ರಾಜಕೀಯ ಅಧಿಕಾರದ ಹೊರತಾಗಿ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಈ ವಾಸ್ತವ ಸಂಗತಿಯನ್ನು ಅರಿತುಕೊಂಡು ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರನ್ನು ಒಳಗೊಂಡ "ಅಹಿಂದ" ಶಕ್ತಿಯು ಹೊಸ ಜನಾಂದೋಲನವಾಗಿ ಬೆಳೆದು ಬರಬೇಕಾದದ್ದು ಅನಿವಾರ್ಯವಾಗಿದೆ. ಅಂಬೇಡ್ಕರ್ ಜಯಂತಿಯು ಅಹಿಂದ ಆಂದೋಲನಕ್ಕೆ ಮುನ್ನುಡಿಯಾಗಲಿ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಹಾರೈಸಿದೆ.

ದಲಿತ ದೌರ್ಜನ್ಯ ಪ್ರಕರಣಗಳು, ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆಗಳು, ಮುಸ್ಲಿಮ್ ಯುವಕರ ಮೇಲೆ ಪ್ರಭುತ್ವದ ದೌರ್ಜನ್ಯಗಳು, ನಕಲಿ ಎನ್ ಕೌಂಟರ್ ಗಳು ಹೆಚ್ಚುತ್ತಿದ್ದು ಶೋಷಿತರಿಗೆ ನ್ಯಾಯ ನಿರಾಕರಣೆಯಾಗುತ್ತಿದೆ. ದೇಶದಲ್ಲಿ ದಲಿತರ ನಡುವೆ ಇನ್ನೊಂದು ಅಂಬೇಡ್ಕರ್ ರೂಪುಗೊಳ್ಳದಂತೆ ವಿಶ್ವವಿದ್ಯಾನಿಲಯಗಳಲ್ಲಿ ಸಾಂಸ್ಥಿಕ ಹತ್ಯೆ ನಡೆಯುತ್ತಿದೆ. ರೋಹಿತ್ ವೇಮುಲ ಪ್ರಕರಣಗಳು ಇದಕ್ಕೆ ನಿದರ್ಶನ. ಇಂತಹ ಸಂದರ್ಭದಲ್ಲಿ ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಇರುವ ದಲಿತ- ಮುಸ್ಲಿಮ್ ಸಮುದಾಯಗಳು ಐಕ್ಯಗೊಂಡು ಜನಾಂದೋಲನ ರೂಪಿಸಬೇಕಾದದ್ದು ಕಾಲದ ಬೇಡಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಎಲ್ಲರಿಗೂ ಸಮಾನ ಹಕ್ಕು, ನ್ಯಾಯ, ಅವಕಾಶ ಸಿಗುವಂತಾಗಲು ಹೋರಾಟ ನಡೆಸಬೇಕಾದದ್ದು ಭಾರತೀಯನ ಪ್ರಜ್ಞೆಯಾಗಿದೆ. ಅಂಬೇಡ್ಕರ್ ಜಯಂತಿಯು ಇಂತಹ ಪ್ರಜ್ಞೆ ಮೂಡಿಸುವ ವೇದಿಕೆಯಾಗಿ ಮೂಡಿಬರಬೇಕು ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News