ಈ ಗಲ್ಫ್ ದೇಶಗಳಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ.100 ತೆರಿಗೆ ಹಾಕಲು ನಿರ್ಧಾರ!

Update: 2017-04-19 11:27 GMT

ಕುವೈಟ್ ಸಿಟಿ,ಎ.19: ದೇಶದಲ್ಲಿ ಕೆಲವು ಉತ್ತೇಜಕ ಪಾನೀಯಗಳು ಮತ್ತು ತಂಬಾಕು ಉತ್ಪನ್ನಗಳಿಗೆ ಹೆಚ್ಚು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ತಂಬಾಕು ಉತ್ಪನ್ನಗಳಿಗೆ ಶೇ.100 ತೆರಿಗೆ ಹಾಗೂ ಎನರ್ಜಿ ಡ್ರಿಂಕ್ಸ್‌ಗಳಿಗೆ ಶೇ. 50ರಷ್ಟು ತೆರಿಗೆ ವಿಧಿಸಲು ನಿರ್ದೇಶನ ನೀಡಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಹೆಚ್ಚು ತೆರಿಗೆ ವಿಧಿಸುವ ಮೂಲಕ ತಂಬಾಕುಉತ್ಪನ್ನಗಳ ಬಳಕೆ ಕಡಿಮೆಗೊಳಿಸಲು ಸಾಧ್ಯವಾಗಬಹುದು ಎಂದು ಅಧಿಕಾರಿಗಳ ಲೆಕ್ಕವಾಗಿದೆ. ವಿಶೇಷ ಸಾಲಿಗೆ ಸೇರಿದ ಉತ್ಪನ್ನಗಳಿಗೆ ಹೆಚ್ಚು ತೆರಿಗೆ ವಿಧಿಸುವುದನ್ನು ಸೂಚಿಸಿದ ಕರಡು ಮಸೂದೆ ಪಾರ್ಲಿಮೆಂಟ್‌ನಲ್ಲಿ ಪರಿಗಣನೆಗೆ ಬರಲಿದೆ ಎಂದು ಮೂಲಗಳನ್ನು ಉದ್ಧರಿಸಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ತಂಬಾಕುಸೇವನೆ ಮತ್ತು ಶಕ್ತಿವರ್ಧಕ ಪಾನೀಯಗಳು, ಆರೋಗ್ಯ ಹಾನಿಕರ, ಆಡಂಬರ ಪ್ರದರ್ಶನಕ್ಕಿರುವ ಉತ್ಪನ್ನಗಳಿಗೆ ವಿಶೇಷ ತೆರಿಗೆ ವಿಧಿಸಬೇಕೆನ್ನುವ ಸೂಚನೆ ಪಾರ್ಲಿಮೆಂಟ್ ಪರಿಗಣಿಸಲಿದೆ. ಇದರಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ.100 ಮತ್ತು ಶಕ್ತಿವರ್ಧಕ ಪೇಯಗಳಿಗೆ ಶೇ. 50ರಷ್ಟು ತೆರಿಗೆ ವಿಧಿಸುವ ಬಗ್ಗೆ ಕುವೈಟ್ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.ಈಗಾಗಲೇ ಸೌದಿ ಅರೇಬಿಯದಲ್ಲಿ ಅಲ್ಲಿನ ಶೂರಾ ಕೌನ್ಸಿಲ್ ಸೌದಿ ಸರಕಾರಕ್ಕೆ ವಿಶೇಷ ಸಾಲಿನಲ್ಲಿ ಬರುವ ಉತ್ಪನ್ನಗಳಿಗೆ ತೆರಿಗೆ ವಿಧಿಸಬೇಕೆಂದು ಈಗಾಗಲೇ ಸರಕಾರಕ್ಕೆ ಶಿಫಾರಸು ಮಾಡಿದೆ. ಇದರ ಮುಂದುವರಿದ ಹೆಜ್ಜೆಯಾಗಿ ಕುವೈಟ್‌ನಲ್ಲಿಯೂ ಗೂಡ್ಸ್ ತೆರಿಗೆ ಜಾರಿಗೆ ತರಲು ಸರಕಾರ ಚಿಂತನೆ ನಡೆಸಲಾಗುತ್ತಿದೆ.

 ಕುವೈಟ್ ಆರೋಗ್ಯಸಚಿವಾಲಯ ಕೂಡಾ ಈ ಹಿಂದೆಯೇ ತಂಬಾಕು ಉತ್ಪನ್ನಗಳಿಗೆ ಶೇ. 100ರಷ್ಟು ತೆರಿಗೆ ವಿಧಿಸಲು ಶಿಫಾರಸು ಮಾಡಿತ್ತು. ತೆರಿಗೆ ದ್ವಿಗುಣವಾಗುವುದರೊಂದಿಗೆ ಮಾರುಕಟ್ಟೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯನ್ನು ಅದು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News