ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಭಾರತೀಯನಿಗೆ ನೆರವಾದ ಫೇಸ್ಬುಕ್ ಸ್ಟೇಟಸ್

Update: 2017-04-20 06:10 GMT

ಸೌದಿ ಅರೇಬಿಯಾ, ಎ.20: ಸೌದಿ ಅರೇಬಿಯಾದ ಮಕ್ಕ ಪ್ರದೇಶದಲ್ಲಿ ಹೌಸ್ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಕಫೀಲ್ ನ ಕಿರುಕುಳದಿಂದ ನೊಂದು, ಸೌದಿ ಕಾನೂನಿಗೆ ಸಿಲುಕಿ ತಾನು ನರಕಯಾತನೆ ಅನುಭವಿಸುತ್ತಿರುವ ವಿಚಾರವನ್ನು ಫೇಸ್ಬುಕ್ ಮೂಲಕ ಗೆಳೆಯನೊಬ್ಬನಿಗೆ ತಿಳಿಸಿದ್ದು, ಈ ಬಗ್ಗೆ ಅವರ ಗೆಳೆಯ ಹಾಕಿದ್ದ ಸ್ಟೇಟಸ್ ನಿಂದಾಗಿ ನೊಂದ ವ್ಯಕ್ತಿ ಮತ್ತೆ ಭಾರತಕ್ಕೆ ಹಿಂದಿರುಗುವಂತಾಗಿದೆ.

ಮಕ್ಕದಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಬಾಬಾ ಪಟೇಲ್ ಚಲಾಯಿಸುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ವಾಹನವೊಂದು ಢಿಕ್ಕಿ ಹೊಡೆದಿತ್ತು. ಕಫೀಲ್ ನ ವಾಹನಕ್ಕೆ ಇನ್ಶೂರೆನ್ಸ್ ಇಲ್ಲದಿದ್ದುದರಿಂದ 16,000 ಸೌದಿ ರಿಯಾಲ್ ಗಳನ್ನು ಪಾವತಿಸಬೇಕು ಎಂದು ಆತ ಪಟ್ಟುಹಿಡಿದಿದ್ದ. ಇಷ್ಟೇ ಅಲ್ಲದೆ ಹಣ ಪಾವತಿಸದಿದ್ದಲ್ಲಿ ಊರಿಗೆ ಕಳುಹಿಸುವುದಿಲ್ಲ ಎಂದು ಬೆದರಿಸುತ್ತಿದ್ದ. ಇದರಿಂದ ಕಂಗಾಲಾದ ಬಾಬಾ ಪಟೇಲ್ ಫೇಸ್ ಬುಕ್ ಮೂಲಕ ಗೆಳೆಯ ಅಶ್ರಫ್ ಅಚ್ಚು (ಸಾಹುಕಾರ್) ಎಂಬವರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಭ ಅಶ್ರಫ್ ಫೇಸ್ ಬುಕ್ ನಲ್ಲಿ ಬಾಬಾ ಪಟೇಲ್ ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಸ್ಟೇಟಸ್ ಹಾಕಿದ್ದರು. ಇದನ್ನು ಗಮನಿಸಿದ ಮಕ್ಕ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಶಾಕಿರ್ ಹಕ್  ನೆಲ್ಯಾಡಿ  ಬಾಬಾ ಪಟೇಲ್ ರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಇಂಡಿಯನ್ ಸೋಶಿಯಲ್ ಫೋರಮ್ ನಾಯಕರು, ಕಫೀಲ್ ಹಾಗೂ ಸೌದಿ ಕಾರ್ಮಿಕ ಕೋರ್ಟ್ ಮೂಲಕ 16,000 ರಿಯಾಲ್ ಗಳನ್ನು 6,400 ರಿಯಾಲ್ ಗೆ ಇಳಿಸುವಲ್ಲಿ ನೆರವಾಗಿದ್ದಲ್ಲದೆ, ಭಾರತಕ್ಕೆ ಹೋಗಬೇಕಾದ ಟಿಕೆಟ್ ನ ವ್ಯವಸ್ಥೆಯನ್ನು ಕಫೀಲ್ ಮೂಲಕವೇ ಮಾಡಿಸಲಾಯಿತು.

ಪಾವತಿಸಬೇಕಾದ 6,400 ರಿಯಾಲ್ ಹಣವನ್ನು ಹೊಂದಿಸುವ ಉದ್ದೇಶದಿಂದ "ಆಪರೇಷನ್ ಬಾಬಾ ಪಟೇಲ್" ಎಂಬ ವಾಟ್ಸಾಪ್ ಗ್ರೂಪನ್ನು ಇಂಡಿಯನ್ ಸೋಶಿಯಲ್ ಪೋರಂ ಸದಸ್ಯರಾದ ಇಮ್ರಾನ್ ಅಡ್ಡೂರ್ , ಕಲಂದರ್  ನೌಶಾದ್ ಕರ್ನಿರೆ, ಶಾಹುಲ್ ಹಮೀದ್ ಕಾಶಿಪಟ್ನ, ಶಾಕಿರ್ ಹಕ್ ನೆಲ್ಯಾಡಿ, ಅಶ್ರಫ್ ಅಚ್ಚು, ದಮ್ಮಾಮ್ ನ ಬಿಜಾಪುರ ಅಸೋಸಿಯೇಷನ್ ನ ಇಸ್ಮಾಯಿಲ್ ಖಾಝಿ ನೇತೃತ್ವದಲ್ಲಿ ರಚಿಸಿ 6,400 ಸೌದಿ ರಿಯಾಲ್ ಗಳನ್ನು ಹೊಂದಿಸಲಾಯಿತು. 

ಕಫೀಲ್ ಗೆ ನೀಡಬೇಕಾದ 6,400 ಸೌದಿ ರಿಯಾಲ್ ಗಳನ್ನು ಪಾವತಿಸಿದ ರಂದು ಬಾಬಾ ಪಟೇಲ್ ಮುಂಬೈ ವಿಮಾನ ನಿಲ್ದಾಣದ ಮೂಲಕ ಭಾರತ ತಲುಪಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News