ದುಬೈಯಲ್ಲಿ ಅತ್ಯಂತ ಹೆಚ್ಚು ಅಪಘಾತ ಮಾಡುವವರು ಯಾವ ದೇಶದವರು ಗೊತ್ತೇ ?

Update: 2017-04-21 05:56 GMT

ದುಬೈ, ಎ.21: ದುಬೈಯ ರಸ್ತೆಗಳಲ್ಲಿ ಅತ್ಯಂತ ಹೆಚ್ಚು ಅಪಘಾತಗಳನ್ನು ನಡೆಸುವ ದೇಶದವರ ಪಟ್ಟಿಯಲ್ಲಿ ಎಮಿರೇಟ್ಸ್ ಜನರು ಮೊದಲ ಸ್ಥಾನದಲ್ಲಿದ್ದು, ಅವರು ಒಮ್ಮೆಗೇ ಲೇನ್ ಬದಲಾವಣೆ ಮಾಡಿ ಭೀಕರ ಅಪಘಾತಗಳಿಗೆ ಕಾರಣರಾಗುತ್ತಾರೆ ಎಂದು ದುಬೈ ಪೊಲೀಸರ ಟ್ರಾಫಿಕ್ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಸೈಫ್ ಮುಹೈರ್ ಅಲ್ ಮಝ್ರೋಯಿ ಹೇಳುತ್ತಾರೆ.

ಕಳೆದ ವರ್ಷ ಇಂತಹ 11 ಮಾರಣಾಂತಿಕ ಅಪಘಾತಗಳಿಗೆ ಎಮಿರೇಟಿ ಜನರು ಕಾರಣರಾಗಿದ್ದರೆ, ಭಾರತೀಯ ನಾಗರಿಕರು ಒಂಬತ್ತು ರಸ್ತೆ ಅಪಘಾತಗಳನ್ನು ಇದೇ ರೀತಿಯಾಗಿ ಯಾವುದೇ ಸಂಜ್ಞೆಯಿಲ್ಲದೆ ಲೇನ್ ಬದಲಾವಣೆ ಮಾಡಿ ನಡೆಸಿದ್ದಾರೆ. ನಂತರದ ಸರದಿ 7 ಅಪಘಾತಗಳನ್ನು ನಡೆಸಿದ ಪಾಕಿಸ್ತಾನೀಯರು ಹಾಗೂ 3 ಅಪಘಾತಗಳನ್ನು ನಡೆಸಿದ ಈಜಿಪ್ಟ್ ನಾಗರಿಕರದ್ದಾಗಿದೆ.

ಇಂಡಿಕೇಟರ್ ಆನ್ ಮಾಡದೆ ಒಮ್ಮೆಲೇ ಲೇನ್ ಬದಲಾವಾಣೆ ಮಾಡುವುದು, ಮುಖ್ಯವಾಗಿ ಹೆದ್ದಾರಿಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಗಂಭೀರ ಅಪರಾಧಗಳಾಗಿವೆ. ಮೇಲಾಗಿ ವಾಹನಗಳು ವೇಗವಾಗಿ ಸಾಗುವುದರಿಂದ ಈ ರೀತಿಯಾಗಿ ಲೇನ್ ಬದಲಾವಣೆ ಮಾಡುವಾಗ ಹಿಂದಿನ ವಾಹನದಲ್ಲಿರುವವರು ಒಮ್ಮೆಗೇ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಕೆಲ ಸೆಕೆಂಡುಗಳಾದರೂ ಬೇಕಾಗಿರುವುದರಿಂದ ಅಪಘಾತಗಳನ್ನು ತಪ್ಪಿಸಲಾಗುವುದಿಲ್ಲ ಎಂದು ಮುಝ್ರೋಯಿ ಹೇಳುತ್ತಾರೆ.

ಇಂತಹ ಗಂಭೀರ ನಿಯಮ ಉಲ್ಲಂಘನೆಗಳನ್ನು ಮಾಡದಿರುವಂತೆ ವಾಹನಿಗರಿಗೆ ಅರಿವನ್ನುಂಟು ಮಾಡಲು ದುಬೈ ಪೊಲೀಸರು ನಿರ್ಧರಿಸಿದ್ದಾರಲ್ಲದೆ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸುವಲ್ಲೂ ಕಂಕಣಬದ್ಧರಾಗಿದ್ದಾರೆ ಹಾಗೂ ವಿವಿಧ ಸ್ಥಳಗಳಲ್ಲಿ ಕರಪತ್ರಗಳನ್ನು ವಿತರಿಸಲಿದ್ದಾರೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಸಂಭವಿಸಿದ ಒಟ್ಟು 169 ಅಪಘಾತಗಳಲ್ಲಿ ಐವರು ಸಾವಿಗೀಡಾಗಿದ್ದರು. ಕಳೆದ ವರ್ಷ ಇದೇ ಅವಧಿಯಲ್ಲಿ 137 ಅಪಘಾತಗಳು ಸಂಭವಿಸಿ ಐದು ಜನರು ಮೃತಪಟ್ಟಿದ್ದರು. ಹೆಚ್ಚಿನ ಉಲ್ಲಂಘನೆಗಳು ಮಿನಿ ಬಸ್ ಚಾಲಕರಿಂದ ನಡೆಯುತ್ತವೆ ಎಂದೂ ತಿಳಿದು ಬಂದಿದೆ.

ಕಳೆದ ವರ್ಷ ಒಟ್ಟು 43,430 ಚಾಲಕರು ಹೀಗೆ ಒಮ್ಮಿಂದೊಮ್ಮೆಲೇ ಲೇನ್ ಬದಲಾವಣೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಮುಝ್ರೋಯಿ ಮಾಹಿತಿ ನೀಡಿದ್ದಾರೆ. ಇಂತಹ ಉಲ್ಲಂಘನೆಗಳಿಗೆ 200 ದಿರಮ್ ದಂಡ ವಿಧಿಸಲಾಗುತ್ತದೆಯಲ್ಲದೆ ನಾಲ್ಕು ಕಪ್ಪು ಅಂಕಗಳನ್ನೂ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News