ದುಬೈ: ಈ ನಿಯಮ ಉಲ್ಲಂಘಿಸಿದರೆ ಒಂದು ಲಕ್ಷ ದಿರ್ಹಮ್ ದಂಡ !

Update: 2017-04-24 07:45 GMT

ದುಬೈ, ಎ.24: ನಿಯಮ ಉಲ್ಲಂಘಕರಿಗೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಒಂದು ಲಕ್ಷ ದಿರ್ಹಮ್ ನಷ್ಟು ದೊಡ್ಡ ಮೊತ್ತದ ದಂಡ ಕೂಡ ವಿಧಿಲಾಗುವುದೆಂದರೆ ಅದು ನಂಬಲಸಾಧ್ಯ. ಆದರೆ ನಂಬಲೇ ಬೇಕು. ದುಬೈ ನಗರವನ್ನು ಸ್ಫಟಿಕದಷ್ಟು ಸ್ವಚ್ಛವಾಗಿಡುವುದು ಸ್ಥಳೀಯ ಮುನ್ಸಿಪಾಲಿಟಿಯ ಉದ್ದೇಶ. ಅದಕ್ಕಾಗಿ ಅದು ಹಲವಾರು ನಿಯಮಗಳನ್ನೂ ಜಾರಿಗೊಳಿಸಿದೆ. ವಿವಿಧ ನಿಯಮಗಳ ಉಲ್ಲಂಘನೆಗೆ ವಿವಿಧ ದಂಡ ಮೊತ್ತಗಳನ್ನೂ ನಿಗದಿ ಪಡಿಸಿದೆ.

ಇವುಗಳಲ್ಲಿ ಯಾವ ನಿಯಮ ಉಲ್ಲಂಘನೆಗೆ ಒಂದು ಲಕ್ಷ ದಿರ್ಹಮ್ ದಂಡ ಅಂತೀರಾ? ಯಾವುದೇ ತ್ಯಾಜ್ಯ ನೀರನ್ನು ತೆರೆದ ಸ್ಥಳಗಳಲ್ಲಿ ಬಿಡಲಾಗುತ್ತಿದ್ದರೆ ಅಥವಾ ಸ್ಥಳೀಯಾಡಳಿತ ನಿಗದಿಪಡಿಸಿದ ಸ್ಥಳಗಳನ್ನು ಹೊರತು ಪಡಿಸಿ ಬೇರೆಡೆಗಳಲ್ಲಿ ತ್ಯಾಜ್ಯ ನೀರು ಹರಿಸಲಾಗುತ್ತಿದ್ದರೆ ಬರೋಬ್ಬರಿ ಒಂದು ಲಕ್ಷ ದಿರ್ಹಮ್ ದಂಡ ಪಾವತಿಸಬೇಕಾಗಿದೆ.

ನಾಗರಿಕರ ಏರ್ ಕಂಡಿಷನರುಗಳ ನೀರು ಹೊರಗೆ ರಸ್ತೆಗಳಲ್ಲಿ ಅಥವಾ ಪಾದಚಾರಿಗಳು ನಡೆದಾಡುವ ಸ್ಥಳಗಳಲ್ಲಿ ಸೋರಿಕೆಯಾಗುತ್ತಿದೆ ಎಂದಿಟ್ಟುಕೊಳ್ಳಿ. ಅವರು ಕೂಡ 1000 ದಿರ್ಹಮ್ ದಂಡ ಪಾವತಿಸಬೇಕು. ತ್ಯಾಜ್ಯ ನೀರು ಹರಿಯುವ ಪೈಪ್ ಲೈನ್ ಸೋರಿಕೆಯಾಗುತ್ತಿದ್ದಲ್ಲಿ ಹಾಗೂ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ 10,000 ದಿರ್ಹಂ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದವರಿಗೆ, ರಸ್ತೆಗಳಲ್ಲಿ ಕಸ ಬಿಸಾಡಿದವರಿಗೆ ಹಾಗೂ ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜಿಸಿದವರಿಗೆ 500 ದಿರ್ಹಮ್ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

ದುಬೈ ಮೆಟ್ರೊ, ಬಸ್ಸುಗಳು ಹಾಗೂ ಪ್ಲಾಟ್‌ಫಾರ್ಮ್ ಗಳಲ್ಲಿ ನೀವು ಚುಯಿಂಗ್ ಗಮ್ ಅಗಿಯುವಂತಿಲ್ಲ. ಸಿಕ್ಕಿ ಬಿದ್ದಲ್ಲಿ 1000 ದಿರ್ಹಮ್ ದಂಡ ಪಾವತಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News