ಸಾಮಾನ್ಯ ನಾಗರೀಕನ ದೂರಿನ ಪರಿಣಾಮ : ಹುದ್ದೆ ಕಳಕೊಂಡ ಸೌದಿ ಸಚಿವ

Update: 2017-04-24 11:22 GMT
ಖಾಲಿದ್ ಅಲ್-ಅರಜ್

ರಿಯಾದ್, ಎ. 24: ಸೌದಿ ಅರೇಬಿಯದ ಸಚಿವರೊಬ್ಬರ ವಿರುದ್ಧ ಯುವಕನೊಬ್ಬ ಸ್ವಜನ ಪಕ್ಷಪಾತದ ಆರೋಪವನ್ನು ಹೊರಿಸಿ ದೂರು ಸಲ್ಲಿಸಿದ ಬಳಿಕ, ಆ ಸಚಿವರು ತಮ್ಮ ಹುದ್ದೆಯನ್ನೇ ಕಳೆದುಕೊಂಡ ಘಟನೆಯೊಂದು ವರದಿಯಾಗಿದೆ.

ಸೌದಿ ಅರೇಬಿಯದ ನಾಗರಿಕ ಸೇವೆಗಳ ಸಚಿವ ಖಾಲಿದ್ ಅಲ್-ಅರಜ್, ಸಚಿವರಾದ ತಕ್ಷಣ ತನ್ನ ಅರ್ಹತೆಯಿಲ್ಲದ ಮಗನನ್ನು ಇಲಾಖೆಯ ಉನ್ನತ ಹುದ್ದೆಗೆ ನೇಮಿಸಿ ತನ್ನ ಹುದ್ದೆಯನ್ನು ಕಳೆದುಕೊಂಡವರು.

ಅಧಿಕಾರ ದುರುಪಯೋಗಪಡಿಸಿಕೊಂಡು ತನ್ನ ಮಗನಿಗೆ ಉನ್ನತ ಹುದ್ದೆ ಕೊಡಿಸಿದ ಸಚಿವರ ಬಗ್ಗೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿರುವುದನ್ನು ಸಅದ್ ಅಲ್-ತುವೈನಿ ಎಂಬ ಯುವಕ ಗಮನಿಸಿದರು.

ಅವರು ಸಚಿವರ ವಿರುದ್ಧ ಸೌದಿ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಆಯೋಗ (ನಝಹ)ಕ್ಕೆ ದೂರು ಸಲ್ಲಿಸಿದರು.

ದೂರು ಅರ್ಜಿ ಸಿದ್ಧವಾದ ಬಳಿಕ ಅದರಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವರು ಅದನ್ನು ಟ್ವಿಟರ್‌ನಲ್ಲಿ ಹಾಕಿದರು. ಅಂತಿಮವಾಗಿ ಪರಿಷ್ಕೃತ ದೂರು ಅರ್ಜಿಯನ್ನು ಅವರು ಪಡೆದುಕೊಂಡರು.

 ‘‘ಈ ವಿಷಯದ ಬಗ್ಗೆ ಮಾತನಾಡಲು ನಾನು ಭ್ರಷ್ಟಾಚಾರ ನಿಗ್ರಹ ಕಚೇರಿಗೆ 2016 ಅಕ್ಟೋಬರ್ 26ರಂದು ಹೋದೆ. ನಾನು ದೂರು ಸಲ್ಲಿಸಿದ ಬಳಿಕ, ಅಧ್ಯಕ್ಷರ ಕಾರ್ಯದರ್ಶಿ ನನ್ನನ್ನು ಭೇಟಿಯಾಗುತ್ತಾರೆ ಎಂದು ನನಗೆ ತಿಳಿಸಲಾಯಿತು. ಕಾರ್ಯದರ್ಶಿಯ ಭೇಟಿಯ ವೇಳೆ, ಟ್ವಿಟರ್‌ನಲ್ಲಿ ನಾನು ಪಡೆದುಕೊಂಡಿದ್ದ ದಾಖಲೆಗಳನ್ನು ಕಾರ್ಯದರ್ಶಿಗೆ ಸಲ್ಲಿಸಿದೆ’’ ಎಂದು ಶನಿವಾರ ‘ಅಲ್-ಅರೇಬಿಯ.ನೆಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ತುವೈನಿ ಹೇಳಿದರು.

ದೂರನ್ನು ಗಂಭೀರವಾಗಿ ಪರಿಗಣಿಸಿದ ಭ್ರಷ್ಟಾಚಾರ ನಿಗ್ರಹ ಆಯೋಗ ಸಚಿವರು ಮತ್ತು ಅವರ ಮಗನನ್ನು ತನಿಖೆಗೊಳಪಡಿಸಿತು. ನಾಲ್ಕು ದಿನಗಳ ಹಿಂದಷ್ಟೇ ಸೌದಿಯಲ್ಲಿ ಜನಸಾಮಾನ್ಯರೊಬ್ಬರ ದೂರಿಗೆ ಸಂಬಂಧಿಸಿ ಸಚಿವರೊಬ್ಬರ ತಲೆದಂಡವಾಗುತ್ತಿರುವುದು ಇದೇ ಮೊದಲು.

         (ಸಅದ್ ಅಲ್-ತುವೈನಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News