ಅಮೆರಿಕ ವಿಮಾನಯಾನ ಸಂಸ್ಥೆಗಳಿಂದ ಪೀಡನೆ : ಕತರ್ ಏರ್‌ವೇಸ್ ಮುಖ್ಯಸ್ಥ ಆರೋಪ

Update: 2017-04-24 14:47 GMT

ದುಬೈ, ಎ. 24: ಕೊಲ್ಲಿಯ ವಿಮಾನಯಾನ ಸಂಸ್ಥೆಗಳಿಗೆ ಸರಕಾರಗಳಿಂದ ಸಬ್ಸಿಡಿಗಳು ಸಿಗುತ್ತಿವೆ ಎಂಬುದಾಗಿ ಅಮೆರಿಕನ್ ವಿಮಾನಯಾನ ಸಂಸ್ಥೆಗಳು ದೂರುತ್ತಿರುವುದರ ಬಗ್ಗೆ ಕೆಂಡ ಕಾರಿರುವ ಕತರ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಅಕ್ಬರ್ ಅಲ್-ಬಕರ್, ಈ ರೀತಿಯಲ್ಲಿ ಕೊಲ್ಲಿಯ ವಿಮಾನಯಾನ ಸಂಸ್ಥೆಗಳನ್ನು ಅಮೆರಿಕದ ವಿಮಾನಯಾನ ಸಂಸ್ಥೆಗಳು ಪೀಡಿಸುತ್ತಿವೆ ಎಂದು ಆರೋಪಿಸಿದರು.

ಅದೇ ವೇಳೆ, ಕೊಲ್ಲಿ ವಿಮಾನಗಳ ವಿರುದ್ಧ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ನಿರ್ಬಂಧಗಳ ಹೊರತಾಗಿಯೂ, ಅಮೆರಿಕದ ಹೊಸ ಮಾರ್ಗಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಅವರು ಘೋಷಿಸಿದರು.

ಕತರ್ ಏರ್‌ವೇಸ್, ದುಬೈನ ಎಮಿರೇಟ್ಸ್ ಮತ್ತು ಅಬುಧಾಬಿಯ ಎತಿಹಾದ್ ವಿಮಾನಯಾನ ಸಂಸ್ಥೆಗಳು ತಮ್ಮ ಖಂಡಾಂತರ ಸೇವೆಗಳನ್ನು ವಿಸ್ತರಿಸುವುದಕ್ಕಾಗಿ ಸರಕಾರದ ಸಬ್ಸಿಡಿಗಳನ್ನು ಪಡೆಯುತ್ತಿವೆ ಎಂಬುದಾಗಿ ಅಮೆರಿಕದ ಡೆಲ್ಟ, ಯುನೈಟೆಡ್ ಮತ್ತು ಅಮೆರಿಕನ್ ಏರ್‌ಲೈನ್ಸ್ ಸಂಸ್ಥೆಗಳು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಹಿನ್ನೆಲೆಯಲ್ಲಿ, ಕೊಲ್ಲಿ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕದ ಸಂಸ್ಥೆಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿವೆ.ಆದರೆ, ಈ ಆರೋಪವನ್ನು ಕೊಲ್ಲಿ ವಿಮಾನಯಾನ ಸಂಸ್ಥೆಗಳು ನಿರಾಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News