ಹಜ್, ಉಮ್ರಾವನ್ನು ಸುರಕ್ಷಿತಗೊಳಿಸಲು ಸೌದಿ ಯೋಜನೆ

Update: 2017-04-29 13:15 GMT

ಜಿದ್ದಾ (ಸೌದಿ ಅರೇಬಿಯ), ಎ. 29: ಸೌದಿ ಅರೇಬಿಯ ಸರಕಾರ ಹಾಗೂ ಹಜ್ ಮತ್ತು ಉಮ್ರಾ ಸಂಶೋಧನಾ ಕೇಂದ್ರ ಸೇರಿದಂತೆ ಎಲ್ಲ ಸಂಬಂಧಿತ ಪ್ರಾಧಿಕಾರಗಳು ಮತ್ತು ಸಂಸ್ಥೆಗಳು, ಹಜ್ ಮತ್ತು ಉಮ್ರಾ ವ್ಯವಸ್ಥೆ ಮತ್ತು ಸೌಲಭ್ಯಗಳನ್ನು ಸುಧಾರಿಸಲು ಮತ್ತು ಅಭಿವೃದ್ಧಿಪಡಿಸಲು ಮುಂದಾಗಿವೆ.

‘‘ಸಂಶೋಧನಾ ಕೇಂದ್ರ ನಡೆಸಿರುವ ವೈಜ್ಞಾನಿಕ ಸಂಶೋಧನೆಯ ಅನುಸಾರ ಸುರಕ್ಷಿತ ಹಜ್ ಮತ್ತು ಉಮ್ರಾವನ್ನು ಖಾತರಿಪಡಿಸುವುದಕ್ಕಾಗಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಸರಕಾರ ಮತ್ತು ಎಲ್ಲ ಸಂಬಂಧಿತ ಪ್ರಾಧಿಕಾರಗಳು ತಮ್ಮ ಮಾನವ ಹಾಗೂ ತಾಂತ್ರಿಕ ಸಾಮರ್ಥ್ಯಗಳನ್ನು ಪರಿಶೀಲಿಸುತ್ತಿವೆ’’ ಎಂದು ಉಮ್ ಅಲ್-ಕುರಾ ವಿಶ್ವವಿದ್ಯಾನಿಲಯದ ಅಧ್ಯಕ್ಷ ಹಾಗೂ ಹಜ್ ಮತ್ತು ಉಮ್ರಾ ಸಂಶೋಧನ ಕೇಂದ್ರದ ಪ್ರಧಾನ ಉಸ್ತುವಾರಿ ಬಕ್ರಿ ಬಿನ್ ಮಾತೌಕ್ ಅಸ್ಸಸ್‌ ಹೇಳಿದರು.

ಪವಿತ್ರ ಮಸೀದಿಗಳಿಗೆ ಭೇಟಿ ನೀಡುತ್ತಿರುವ ಯಾತ್ರಿಕರು ಮತ್ತು ಸಂದರ್ಶಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ನೀಡುತ್ತಿರುವುದಕ್ಕಾಗಿ ಅವರು ಸರಕಾರವನ್ನು ಪ್ರಶಂಸಿಸಿದರು.

ಹಜ್ ವೇಳೆ ಎದುರಾಗುವ ಅಡೆ ತಡೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸುರಕ್ಷಿತ ಯಾತ್ರೆಗೆ ನೆರವಾಗುವ ಪರಿಹಾರ ಸೂಚಿಸುವುದಕ್ಕಾಗಿ ಕೇಂದ್ರವು ಇತ್ತೀಚೆಗೆ ವೈಜ್ಞಾನಿಕ ತಂಡವೊಂದನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News