×
Ad

ಅಕ್ರಮ ವಲಸಿಗರಿಗೆ ಕ್ಷಮೆ ಯೋಜನೆ : ಸೌದಿಯಿಂದ ಮರಳುತ್ತಿರುವ ಭಾರತೀಯರು ಎಷ್ಟು ಸಾವಿರ ಮಂದಿ ಗೊತ್ತೇ ?

Update: 2017-05-03 17:18 IST

ರಿಯಾದ್ (ಸೌದಿ ಅರೇಬಿಯ), ಮೇ 3: ಸೌದಿ ಅರೇಬಿಯದಲ್ಲಿರುವ ಸುಮಾರು 20,000 ಭಾರತೀಯರು ‘90 ದಿನಗಳ ಕ್ಷಮಾದಾನ’ ಯೋಜನೆಯ ಲಾಭ ಪಡೆದು ಭಾರತಕ್ಕೆ ಹಿಂದಿರುಗಲಿದ್ದಾರೆ. ಸೋಮವಾರ ಸಂಜೆಯ ವೇಳೆಗೆ 20,321 ಭಾರತೀಯ ಪ್ರಜೆಗಳು ಈ ಯೋಜನೆಯ ಪ್ರಯೋಜನ ಪಡೆಯುವ ಇಚ್ಛೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಲಹೆಗಾರರಾಗಿರುವ ಅನಿಲ್ ನೌತಿಯಾಲ್ ತಿಳಿಸಿದರು.

ಸೌದಿ ಅರೇಬಿಯವನ್ನು ತೊರೆಯಲು ಬಯಸುವ ಭಾರತೀಯ ರಾಷ್ಟ್ರೀಯರಿಗಾಗಿ ಸೌದಿ ಸರಕಾರವು ರಿಯಾದ್‌ನಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಿದೆ ಎಂದು ನೌತಿಯಾಲ್‌ರನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯ’ ವರದಿ ಮಾಡಿದೆ.

ಸೌದಿ ಅರೇಬಿಯ ಸರಕಾರವು ನೀಡಿರುವ ಕ್ಷಮಾದಾನದ ಲಾಭವನ್ನು ಪಡೆದುಕೊಳ್ಳುವಂತೆ ಆ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲ ಭಾರತೀಯರಿಗೆ ರಾಯಭಾರ ಕಚೇರಿ ಮನವಿ ಮಾಡಿದೆ ಎಂದು ಅವರು ಹೇಳಿದರು. ಈ ಸೌಲಭ್ಯವು ಸೌದಿ ಅರೇಬಿಯದಾದ್ಯಂತ ಇರುವ 21 ಸ್ಥಳಗಳಲ್ಲಿ ಲಭ್ಯವಿರುತ್ತದೆ.

2013ರಲ್ಲಿಯೂ ಅಕ್ರಮ ವಾಸಿಗಳಿಗೆ ಇಂಥದೇ ಸೌಲಭ್ಯವನ್ನು ಒದಗಿಸಲಾಗಿತ್ತಾದರೂ, ಅದು ರಿಯಾದ್ ಮತ್ತು ಜಿದ್ದಾಗಳಲ್ಲಿರುವ ವಲಸಿಗರಿಗೆ ಸೀಮಿತವಾಗಿತ್ತು.

ತಮಿಳುನಾಡಿನ ಸುಮಾರು 1,500 ಕಾರ್ಮಿಕರು ಈ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಗೆ ಅರ್ಜಿ ಹಾಕಿದವರ ಪೈಕಿ ಹೆಚ್ಚಿನವರು ಉತ್ತರಪ್ರದೇಶ ಮತ್ತು ಬಿಹಾರದವರು.

‘‘ಹೆಚ್ಚಿನ ಅರ್ಜಿಗಳು ಭಾರತಕ್ಕೆ ಮರಳಲು ಬಯಸುವ ನೀಲಿ ಕಾಲರ್ (ಕಾರ್ಮಿಕರು) ಕೆಲಸಗಾರರಿಂದ ಬಂದಿವೆ’’ ಎಂದು ನೌತಿಯಾಲ್ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಹೇಳಿದರು. ‘‘ಈ ಬಾರಿಯ ಸಂಖ್ಯೆ 2013ರ ಕ್ಷಮಾದಾನ ಅವಧಿಯ ಸಂಖ್ಯೆಗಿಂತ ಕಡಿಮೆಯಾಗಿದೆ. ಆದರೆ, ವೀಸಾ ಅವಧಿ ಮೀರಿ ದೇಶದಲ್ಲಿ ನೆಲೆಸಿರುವ ಹೆಚ್ಚಿನ ಕುಟುಂಬಗಳು ಈಗ ಭಾರತಕ್ಕೆ ವಾಪಸಾಗಲು ಬಯಸಿವೆ. ಭಾರತಕ್ಕೆ ವಾಪಸಾಗಲು ಅರ್ಜಿ ಸಲ್ಲಿಸಿರುವವರಿಗಾಗಿ ನಾವು ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್‌ಗಳಲ್ಲಿ ಟೆಂಟ್‌ಗಳನ್ನು ಹಾಕಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News