×
Ad

ಅಬುಧಾಬಿಯಲ್ಲಿ ಲಾಟರಿ ಗೆದ್ದು ಮಿಲಿಯಾಧಿಪತಿಯಾದ ಭಾರತೀಯ

Update: 2017-05-04 15:52 IST

ಅಬುಧಾಬಿ,ಮೇ 4 : ಅಬುಧಾಬಿಯಲ್ಲಿ ವಾಸಿಸುತ್ತಿರುವ ಭಾರತೀಯ ವಲಸಿಗರೊಬ್ಬರು ಬಿಗ್ ಟಿಕೆಟ್ ಸೀರೀಸ್ ಮಾಸಿಕ ರ್ಯಾಫಲ್ ಡ್ರಾದಲ್ಲಿ 5 ಮಿಲಿಯನ್ ದಿರ್ಹಮ್ ಬಹುಮಾನ ಪಡೆದಿದ್ದಾರೆ. ವಿಜೇತರಾಗಿರುವ 52 ವರ್ಷದ ತಮಿಳುನಾಡು ಮೂಲದ ತಂಗರಾಜ್ ನಾಗರಾಜನ್ ಅವರ ಅದೃಷ್ಟವಂತ ಟಿಕೆಟ್ ಸಂಖ್ಯೆ 066002 ಆಗಿತ್ತು. ಈ ಅದೃಷ್ಟವಂತ ಟಿಕೆಟನ್ನು ಎತ್ತಿದವರು ಕಳೆದ ತಿಂಗಳಿನ ವಿಜೇತರಾದ ನಿಶಿತಾ ರಾಧಾಕೃಷ್ಣ ಪಿಳ್ಳೈ. ಎಪ್ರಿಲ್ ತಿಂಗಳಲ್ಲಿ ನಡೆದ ರ್ಯಾಫಲ್ ಡ್ರಾನಲ್ಲಿ ಅವರು 10 ಮಿಲಿಯನ್ ದಿರ್ಹಮ್ ಪ್ರಶಸ್ತಿ ಗೆದ್ದಿದ್ದರು.

ಈ ಬಾರಿ ಗೆದ್ದಿರುವ ನಾಗರಾಜನ್ ಬಿಗ್ ಟಿಕೆಟ್ ರ್ಯಾಫಲ್ ಡ್ರಾದಲ್ಲಿ ಗೆದ್ದ 179ನೇ ವ್ಯಕ್ತಿಯಾಗಿದ್ದಾರಲ್ಲದೆ ರಾತ್ರಿ ಬೆಳಗಾಗುವುದರೊಳಗಾಗಿ ಮಿಲಿಯಾಧಿಪತಿಯಾಗಿದ್ದಾರೆ.ಈ ತಿಂಗಳ ರ್ಯಾಫಲ್ ಡ್ರಾಗಾಗಿ ಅವರು ಮೂರು ಟಿಕೆಟ್ ಖರೀದಿಸಿದ್ದರು, ತಂಗರಾಜನ್ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬನ ವಯಸ್ಸು 22 ಆಗಿದ್ದರೆ ಇನ್ನೊಬ್ಬನಿಗೆ 12 ವರ್ಷ ವಯಸ್ಸು. ಬಹುಮಾನ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಬಳಸುವುದಾಗಿ ಅವರು ಹೇಳಿದ್ದಾರೆ. ಅದೇ ಸಮಯ ಸ್ವಲ್ಪ ಹಣವನ್ನು ದಾನ ಮಾಡಲಿಚ್ಛಿಸುವುದಾಗಿ ಹೇಳಿದ ಅವರು ತಮ್ಮ ಊರಾದ ಚೆನ್ನೈನಲ್ಲಿ ಮನೆಯೊಂದನ್ನು ನಿರ್ಮಿಸುವ ಇರಾದೆಯನ್ನೂ ಹೊಂದಿದ್ದಾರೆ.

ಅವರು ಕಳೆದ 18 ವರ್ಷಗಳಿಂದ ಅಬುಧಾಬಿಯ ಒಂದು ಕಂಪೆನಿಯಲ್ಲಿ ದುಡಿಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News