ಸೌದಿ-ಕುವೈತ್ ಗಡಿಯಲ್ಲಿನ ಇರಾಕಿಗಳ ಬಡಾವಣೆಯಲ್ಲಿ ಮಲಯಾಳಿ ಅಂಗಡಿ
ದಮ್ಮಾಮ್,ಮೇ 8: ವಿಶ್ವದ ಯಾವುದೇ ಮೂಲೆಗೆ ಹೋದರೂ ಕನಿಷ್ಠ ಓರ್ವ ಮಲಯಾಳಿ ಸಿಕ್ಕೇ ಸಿಗುತ್ತಾನೆ ಎನ್ನುವ ಮಾತೊಂದು ಇದೆ. ಇದಕ್ಕೆ ಸೌದಿ ಅರೇಬಿಯಾ-ಕುವೈತ್ ಗಡಿಯಲ್ಲಿನ ಹಫರ್ ಅಲ್ ಬತಿನ್‌ನ ಮರಳುಗಾಡು ಪ್ರದೇಶದಲ್ಲಿ ದಿನಸಿ ಅಂಗಡಿಯೊಂದನ್ನು ನಡೆಸುತ್ತಿರುವ ಕಣ್ಣೂರು ಜಿಲ್ಲೆಯ ಮಲಯಾಳಿ ರಾಜೀವ್‌ಗಿಂತ ಬೇರೆ ಪುರಾವೆ ಬೇಕಿಲ್ಲ. ಮೊದಲ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಸೌದಿಗೆ ವಲಸೆ ಬಂದಿದ್ದ ಸುಮಾರು 25 ಇರಾಕಿ ಕುಟುಂಬಗಳು ಇಲ್ಲಿ ನೆಲೆಸಿವೆ.
ಯುದ್ಧದ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಅಧಿಕ ಇರಾಕಿ ಕುಟುಂಬಗಳು ತಮ್ಮ ಮಾತೃಭೂಮಿಯನ್ನು ತೊರೆದು ಸೌದಿಗೆ ವಲಸೆ ಬಂದಿದ್ದವು. ಅವರಿಗೆಲ್ಲ ಸೌದಿ ಸರಕಾರವು ಪೌರತ್ವವನ್ನು ಮಂಜೂರು ಮಾಡಿದ ಬಳಿಕ ಹೆಚ್ಚಿನವರು ಇತರ ಪಟ್ಟಣಗಳಿಗೆ ತೆರಳಿ ತಳವೂರಿದ್ದರು. ಮರಳುಗಾಡಿನಲ್ಲಿಯೇ ಉಳಿದುಕೊಂಡಿದ್ದ ಇತರ ಕುಟುಂಬಗಳಿಗಾಗಿ ಸರಕಾರವು ಸಣ್ಣ ಮನೆಗಳನ್ನು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ನಿರ್ಮಿಸಿ ಕೊಟ್ಟಿತ್ತು.
ಬಿಸಿಲಿಗೆ ಕಾದು ಕೆಂಡವಾಗುವ ಈ ಮರಳುಗಾಡಿನಲ್ಲಿ ರಾಜೀವ್‌ನ ಅಂಗಡಿ ಅಥವಾ ಇತರ ಮನೆಗಳಲ್ಲಿ ಏರ್ ಕಂಡಿಷನರ್‌ಗಳಿಲ್ಲ. ಏರ್ ಕೂಲರ್ ಈ ಪ್ರದೇಶದಲ್ಲಿ ಲಭ್ಯವಿರುವ ಏಕೈಕ ಐಷಾರಾಮವಾಗಿದೆ. ಇಲ್ಲಿಯ ಇರಾಕಿಗಳ ಬಳಿ ದೂರದ ಸ್ಥಳಗಳಿಗೆ ತೆರಳಲು ಅಗತ್ಯ ಕಾನೂನು ದಾಖಲೆಗಳಿಲ್ಲ, ಹೀಗಾಗಿ ಇವರೆಲ್ಲ ಇಲ್ಲಿಯೇ ಜಾನುವಾರುಗಳನ್ನು ಮೇಯಿಸುವ ಕೆಲಸ ಮಾಡಿಕೊಂಡಿದ್ದಾರೆ. ಇವರಿಗೆ ಶಾಸನಬದ್ಧ ಸ್ಥಾನಮಾನ ದೊರೆತರೆ ಇವರೂ ಈ ಸ್ಥಳವನ್ನು ತೊರೆದು ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕಿಕೊಂಡು ಹೋಗಬಹುದು ಎನ್ನುತ್ತಾನೆ ರಾಜೀವ್. ಅಲ್ಲಿಯವರೆಗೆ ಈ ಕುಟುಂಬಗಳಿಗೆ ದಿನಸಿಗಳನ್ನು ಒದಗಿಸುವ ಏಕೈಕ ಅಂಗಡಿ ರಾಜೀವ್‌ದು. ಬಳಿಕ ರಾಜೀವ್ ಅಂಗಡಿ ಏನಾಗುತ್ತದೋ ಗೊತ್ತಿಲ್ಲ.