ಸೌದಿ ತೊರೆದ 32,000 ಅಕ್ರಮ ವಲಸಿಗರು : 1 ಲಕ್ಷಕ್ಕೂ ಅಧಿಕ ಬಂಧನ

Update: 2017-05-12 13:40 GMT

ಜಿದ್ದಾ (ಸೌದಿ ಅರೇಬಿಯ), ಮೇ 12: ಸೌದಿ ಅರೇಬಿಯದ ಅಕ್ರಮ ವಲಸಿಗರಿಗೆ ಕ್ಷಮಾದಾನ ಕಾರ್ಯಕ್ರಮದ ಅನ್ವಯ, 32,000ಕ್ಕೂ ಅಧಿಕ ಅಕ್ರಮವಾಸಿ ವಿದೇಶೀಯರು ದೇಶ ಬಿಟ್ಟು ಹೋಗಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

‘ಅಕ್ರಮ ವಲಸಿಗರಿಲ್ಲದ ದೇಶ’ ಎಂಬ ಸೌದಿ ಅರೇಬಿಯ ಸರಕಾರದ ಅಭಿಯಾನ ಮಾರ್ಚ್ 29ರಂದು ಆರಂಭಗೊಂಡಿದೆ. ಅಭಿಯಾನ ಆರಂಭಗೊಂಡಂದಿನಿಂದ ದೇಶದ ವಸತಿ ಕಾನೂನುಗಳನ್ವಯ ಒಂದು ಲಕ್ಷಕ್ಕೂ ಅಧಿಕ ಅಕ್ರಮ ನಿವಾಸಿಗಳನ್ನು ಬಂಧಿಸಲಾಗಿದೆ.

ಕ್ಷಮಾದಾನ ಕಾರ್ಯಕ್ರಮದ ಪ್ರಕಾರ, ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ಯಾವುದೇ ದಂಡ ಪಾವತಿಸದೆ ದೇಶವನ್ನು ತೊರೆಯಲು 90 ದಿನಗಳ ಕಾಲಾವಕಾಶವನ್ನು ನೀಡಲಾಗುವುದು.

ಕ್ಷಮಾದಾನ ಅವಧಿಯನ್ನು ಸದುಪಯೋಗಪಡಿಸಿಕೊಂಡು ದೇಶ ತೊರೆಯುವಂತೆ ರಿಯಾದ್‌ನಲ್ಲಿ ಅಭಿಯಾನದ ಉಪ ಉಸ್ತುವಾರಿ ಕರ್ನಲ್ ಸಫರ್ ಬಿನ್ ಡ್ಲೇಮ್ ಅಕ್ರಮ ವಲಸಿಗರಿಗೆ ಕರೆ ನೀಡಿದರು.

‘‘ಈ ಅವಧಿಯಲ್ಲಿ ದೇಶದಿಂದ ಹೊರಹೋಗದವರು ಎಲ್ಲ ದಂಡ ಮತ್ತು ಶುಲ್ಕಗಳನ್ನು ಪಾವತಿಸಬೇಕು ಹಾಗೂ ಅವರನ್ನು ಅಪರಾಧಿ ಎಂಬುದಾಗಿ ಪರಿಗಣಿಸಲಾಗುವುದು. ಪ್ರತಿಯೊಬ್ಬನೂ ಕಾನೂನುಬದ್ಧ ನಿವಾಸಿಯಾಗಬೇಕು ಎನ್ನುವುದು ಈ ಅಭಿಯಾನದ ಗುರಿಯಾಗಿದೆ’’ ಎಂದರು.
ಕ್ಷಮಾದಾನ ಅವಧಿ ಮುಗಿಯಲು ಇನ್ನು 50ಕ್ಕಿಂತಲೂ ಕಡಿಮೆ ದಿನಗಳು ಉಳಿದಿವೆ.

ಅಭಿಯಾನ ಆರಂಭಗೊಂಡಂದಿನಿಂದ ಈಸ್ಟರ್ನ್ ಪ್ರಾವಿನ್ಸ್, ಮಕ್ಕಾ, ರಿಯಾದ್ ಮತ್ತು ಕಾಸಿಮ್‌ಗಳಲ್ಲಿರುವ ಪಾಸ್‌ಪೋರ್ಟ್ ಇಲಾಖೆಯ ಒಟ್ಟು 78 ಕಚೇರಿಗಳಿಗೆ ವಲಸಿಗರು ಪ್ರತಿ ದಿನ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಈ ಕ್ಷಮಾದಾನ ಯೋಜನೆಯ ಪ್ರಯೋಜನ ಪಡೆಯುವವರನ್ನು ‘ಗಡಿಪಾರು ಮಾಡಲಾಗಿದೆ’ ಎಂಬುದಾಗಿ ದಾಖಲಿಸಲಾಗುವುದಿಲ್ಲ ಎಂಬುದಾಗಿ ಸರಕಾರ ಘೋಷಿಸಿದೆ. ಇದರಿಂದಾಗಿ ಅವರು ಮತ್ತೆ ಕಾನೂನುಬದ್ಧವಾಗಿ ಸೌದಿ ಅರೇಬಿಯಕ್ಕೆ ಮರಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News