ಯುಎಇ: ಚಾಲನಾ ಪರವಾನಿಗೆ ಪರೀಕ್ಷೆಗಳಿಗೆ ಮಿತಿಯಿಲ್ಲ

Update: 2017-05-13 14:32 GMT

ದುಬೈ, ಮೇ 13: ವ್ಯಕ್ತಿಯೋರ್ವ ಎಷ್ಟು ಸಲ ಚಾಲನಾ ಪರವಾನಿಗೆ ಪರೀಕ್ಷೆಗೆ ಹಾಜರಾಗಬಹುದು ಎಂಬ ಮಿತಿಯನ್ನು ಯುಎಇಯ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಇನ್ನೂ ನಿಗದಿಪಡಿಸಿಲ್ಲ ಎಂದು ಹಿರಿಯ ಆರ್‌ಟಿಎ ಅಧಿಕಾರಿಯೊಬ್ಬರು ‘ಖಲೀಜ್ ಟೈಮ್ಸ್’ಗೆ ತಿಳಿಸಿದರು.

ವ್ಯಕ್ತಿಯೊಬ್ಬ 10 ಬಾರಿ ಚಾಲನಾ ಪರವಾನಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ, ಆರು ತಿಂಗಳ ಅವಧಿಗೆ ಆ ವ್ಯಕ್ತಿ ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳುವಂತಿಲ್ಲ ಎಂಬುದಾಗಿ ವೆಬ್‌ಸೈಟೊಂದರಲ್ಲಿ ಪ್ರಕಟಗೊಂಡ ಸುದ್ದಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಇಂಥ ನೀತಿಗೆ ಆರ್‌ಟಿಎ ಇನ್ನೂ ಅಂಗೀಕಾರ ನೀಡಿಲ್ಲ ಹಾಗೂ ಈ ವಿಷಯದ ಬಗ್ಗೆ ಇನ್ನೂ ಸ್ವಲ್ಪ ಸಮಯ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.

‘‘ಪ್ರಾಧಿಕಾರವು ಮಿತಿ ನಿಗದಿಪಡಿಸುವುದೇ, ಇಲ್ಲವೇ ಎಂಬ ಬಗ್ಗೆ ವಿವರಗಳು ಇನ್ನೂ ಲಭಿಸಿಲ್ಲ’’ ಎಂದರು. ಅರ್ಜಿದಾರನೊಬ್ಬ ತೆಗೆದುಕೊಳ್ಳಬೇಕಾಗಿರುವ ತರಗತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂಬ ವರದಿಗಳನ್ನೂ ಅವರು ತಳ್ಳಿಹಾಕಿದರು.

‘‘ನಾವು ಈಗಲೂ ಕನಿಷ್ಠ 40 ಪಾಠಗಳನ್ನು ಮಾಡುತ್ತಿದ್ದೇವೆ. ಆದರೆ, ನಾವು ಪಾಠಗಳ ಸಂಖ್ಯೆಯನ್ನು ಯಾವತ್ತೂ ಹೆಚ್ಚಿಸಲಾಗುವುದಿಲ್ಲ ಎಂದು ನಾವು ಹೇಳುವುದಿಲ್ಲ. ಶ್ರೇಷ್ಠವಾದುದನ್ನು ತರಲು ಖಂಡಿತವಾಗಿಯೂ ನಾವು ನಮ್ಮ ನೀತಿಗಳನ್ನು ಬದಲಾಯಿಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News