ಯುಎಇ ಗರಿಷ್ಠ ವಲಸಿಗರಿರುವ ರಾಷ್ಟ್ರ

Update: 2017-05-18 14:40 GMT

►ವಲಸಿಗರಲ್ಲಿ 30.50 ಲಕ್ಷ ಭಾರತೀಯರು
ಅಬುದಾಭಿ,ಮೇ 18: ಸರಾಸರಿ ಜನಸಂಖ್ಯೆಯ ದೃಷ್ಟಿಯಿಂದ ಯುಎಇಯು ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ವಲಸಿಗರು ನೆಲೆಸಿರುವ ರಾಷ್ಟ್ರವೆಂದು ಬ್ರಿಟನ್‌ನ ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ವಿಶ್ವಸಂಸ್ಥೆಯ ಪ್ರಕಟಿಸಿದ ಅಂಕಿಅಂಶಗಳನ್ನು ವಿಶ್ಲೇಷಿಸಿ, ಪತ್ರಿಕೆಯು ಈ ವರದಿಯನ್ನು ಪ್ರಕಟಿಸಿದೆ.

ಯುಎಇನ ಒಟ್ಟು ಜನಸಂಖ್ಯೆಯ ಶೇ.88ರಷ್ಟು ಮಂದಿ ಬೇರೊಂದು ದೇಶದಲ್ಲಿ ಜನಿಸಿದವರಾಗಿದ್ದಾರೆ. ಯುಎಇನಲ್ಲಿ ನೆಲಸಿರುವ ಬಹುತೇಕ ವಲಸಿಗರು ಸೀಮಿತ ಆದಾಯವನ್ನು ಹೊಂದಿರುವವರಾಗಿದ್ದಾರೆ. ಆದರೆ ಅವರು ನಿರಾಶ್ರಿತರಲ್ಲವೆಂದು ವಿಶ್ವ ಆರ್ಥಿಕ ವೇದಿಕೆಯ ವರದಿ ತಿಳಿಸಿದೆ.

ವಲಸಿಗ ನೀತಿ ಸಂಸ್ಥೆ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಯುಎಇನಲ್ಲಿ ನೆಲೆಸಿರು ವಲಸಿಗರಲ್ಲಿ 30.50 ಲಕ್ಷ ಮಂದಿ ಭಾರತೀಯರು. ಹಾಗೆಯೇ 9.35 ಲಕ್ಷ ಮಂದಿ ಈಜಿಪ್ಟ್ ಹಾಗೂ 9.06 ಲಕ್ಷ ಮಂದಿ ಪಾಕಿಸ್ತಾನದಿಂದ ಬಂದವರಾಗಿದ್ದಾರೆ.

ಯುಎಇ ಹೊರತುಪಡಿಸಿದರೆ, ಕತರ್ ಜಗತ್ತಿನಲ್ಲೆ ಅತ್ಯಧಿಕ ಸಂಖ್ಯೆಯ ವಲಸಿಗರಿರುವ ಎರಡನೆ ದೇಶವಾಗಿದೆ. ಆ ದೇಶದ ಶೇ.75 ಮಂದಿ ವಿದೇಶಿ ಮೂಲದವರಾಗಿದ್ದಾರೆ. ಕತರ್‌ನಲ್ಲಿರುವ ವಲಸಿಗರಲ್ಲಿ ಭಾರತೀಯರು ಗರಿಷ್ಠ ಸಂಖ್ಯೆಯಲ್ಲಿದ್ದು, ಅವರು 6.46 ಲಕ್ಷದಷ್ಟಿದ್ದಾರೆ. ಆನಂತರದ ಸ್ಥಾನಗಳಲ್ಲಿ ಈಜಿಪ್ಟ್ ಹಾಗೂ ಬಾಂಗ್ಲಾದೇಶಗ ವಲಸಿಗರಿದ್ದು, ಅವರ ಸಂಖ್ಯೆ ಕ್ರಮವಾಗಿ 1.64 ಲಕ್ಷ ಹಾಗೂ 1.60 ಲಕ್ಷ ಆಗಿದೆ.

ಕುವೈತ್ ಮೂರನೆ ಸ್ಥಾನದಲ್ಲಿದ್ದು, ಆ ದೇಶದ ಶೇ.74ರಷ್ಡು ಜನಸಂಖ್ಯೆಯು ಬಾರತ, ಈಜಿಪ್ಟ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ವಲಸೆ ಬಂದವರಾಗಿದ್ದಾರೆ.

ಯುರೋಪ್‌ನ ಅತ್ಯಂತ ಪುಟ್ಟ ರಾಷ್ಟ್ರಗಳಾದ ಲಿಶೆನ್‌ಸ್ಟೈನ್ ಹಾಗೂ ಆ್ಯಂಡೊರಾ ಅತ್ಯಧಿಕ ಸಂಖ್ಯೆಯ ವಲಸಿಗರಿರುವ ದೇಶಗಳ ಪಟ್ಟಿಯಲ್ಲಿ ಕ್ರಮವಾಗಿ ನಾಲ್ಕು ಹಾಗೂ ಐದನೆ ಸ್ಥಾನದಲ್ಲಿವೆ. ಕೇವಲ 25 ಕಿ.ಮೀ. ವಿಸ್ತೀರ್ಣದ ಲಿಶೆನ್‌ಸ್ಟೈನ್‌ನಲ್ಲಿ 40 ಸಾವಿರ ಮಂದಿ ನೆಲೆಸಿದ್ದು, ಅವರಲ್ಲಿ ಶೇ.62ರಷ್ಟು ಮಂದಿ ವಿದೇಶಿ ಮೂಲದವರು. ಅವರಲ್ಲಿ ಬಹುತೇಕ ಮಂದಿ ಸ್ವಿಟ್ಜರ್‌ಲ್ಯಾಂಡ್‌ನಿಂದ ವಲಸೆಬಂದವರು. ಆಂಡೋರಾದ ಶೇ.60ರಷ್ಟು ಮಂದಿ ವಲಸಿಗರಾಗಿದ್ದು, ಹೆಚ್ಚಿನವರು ಸ್ಪೇನ್‌ನವರಾಗಿದ್ದಾರೆ.ಕೇಂದ್ರ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳು ಅತ್ಯಂತ ಕಡಿಮೆ ಸಂಖ್ಯೆಯ ವಲಸಿಗರನ್ನು ಆಕರ್ಷಿಸುತ್ತಿವೆಯೆಂದು ವಿಶ್ವ ಆರ್ಥಿಕ ವೇದಿಕೆಯ ವರದಿ ವಿಶ್ಲೇಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News